

ದೊಡ್ಡಬಳ್ಳಾಪುರ : ಜಿಲ್ಲೆಯ ಮೂರು ತಾಲೂಕಿಗೆ ಕಾವೇರಿ ನೀರು ನೀಡಿರುವ ಕಾಂಗ್ರೆಸ್ ಸರ್ಕಾರವು ದೊಡ್ಡಬಳ್ಳಾಪುರ ತಾಲೂಕಿಗೆ ಕಾವೇರಿ ನೀರಿನ ಯೋಜನೆ ಮಂಜೂರು ಮಾಡಿಲ್ಲ. ಬದಲಾಗಿ ವೃಷಭಾವತಿ ಸಂಸ್ಕರಿತ ನೀರು ಮತ್ತು ಬೆಂಗಳೂರಿನ ಕಸ ವಿಲೇವಾರಿ ಮಾಡಲಷ್ಟೇ ನಮ್ಮ ತಾಲೂಕು ಬೇಕಾಗಿದೆ. ಇದು ಮಲತಾಯಿ ಧೋರಣೆ ಎಂದು ಶಾಸಕ ಧೀರಜ್ ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿಗೆ ವೃಷಭಾವತಿ ಸಂಸ್ಕರಿತ ನೀರು ಪೂರೈಕೆ ಮತ್ತು ಬಿಬಿಎಂಪಿ ಕಸದ ಟಕ ಸ್ಥಾಪಿಸುವ ಕುರಿತ ಸಾಧಕ&ಬಾಧಕಗಳ ಕುರಿತು ಚರ್ಚಿಸಲು ನಗರದ ಬಾಬು ಜಗಜೀವನರಾಮ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜಕೀಯ, ಸಂ ಸಂಸ್ಥೆಗಳು, ರೈತ ಮುಖಂಡರು, ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ವೃಷಭಾವತಿ ಸಂಸ್ಕರಿತ ನೀರು ಪೂರೈಕೆ ಮತ್ತು ಬಿಬಿಎಂಪಿ ಕಸದ ಟಕ ಸ್ಥಾಪಿಸಲು ಅವಕಾಶ ನೀಡುವುದಿಲ್ಲ. ಇದರ ಬಗ್ಗೆ ತಾಲೂಕಿನ ಜನತೆ ಕೂಡ ಸಂಪೂರ್ಣ ಬೆಂಬಲ ನೀಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದು, ಸ್ಥಳ ಪರಿಶೀಲನೆ ಮಾಡಿ ಕ್ರಮಗೊಳ್ಳಿ ಎಂದು ತಿಳಿಸಿದ್ದೇನೆ ಎಂದರು.
ನಮ್ಮ ತಾಲೂಕಿಗೆ ಈ ಎರಡೂ ಯೋಜನೆಗಳು ಬೇಡವೇ ಬೇಡ ಎಂದು ತಾಲೂಕಿನ ಎಲ್ಲ 28 ಗ್ರಾಮ ಪಂಚಾಯಿತಿಗಳಿಂದ ಠರಾವು ಮಾಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಕ್ರಮ ವಹಿಸಲಾಗಿದೆ. ಕಾರ್ಯನಿರ್ವಹಿಸುತ್ತಿರುವ ಎಂಎಸ್ಜಿಪಿ ಟಕದಿಂದ ಸಾಸಲು ಮತ್ತು ದೊಡ್ಡಬೆಳವಂಗಲ ಹೋಬಳಿಗಳ ಭೂಮಿ, ಜಲ ಸಂಪೂರ್ಣ ಕಲುಷಿತಗೊಂಡಿದೆ. ಸರ್ಕಾರ ಈಗ ತೆಗೆದುಕೊಂಡಿರುವ ನಿರ್ಧಾರ ಹಿಂಪಡೆಯಲೇಬೇಕು. ಯಾವುದಾದರೂ ಕೈಗಾರಿಕಾ ಪ್ರದೇಶದಲ್ಲಿ ಮಾಡಿಕೊಳ್ಳಲಿ ಎಂದರು.
ದೊಡ್ಡಬಳ್ಳಾಪುರ ರೈತ ಸಂದ ಅಧ್ಯಕ್ಷ ಪ್ರಸನ್ನ ಮಾತನಾಡಿ, ಈ ಹಿಂದೆ ನಾವು ಟ್ರಾ$್ಯಕ್ಟರ್ ರ್ಯಾಲಿ ಮಾಡಿ ವಿರೋಧ ಮಾಡಿದ್ದೆವು. ಈಗ ಮತ್ತದೇ ಯೋಜನೆಯನ್ನು ತಾಲೂಕಿಗೆ ಸರ್ಕಾರ ತರಲು ಹೊರಟಿರುವುದು ದುರಂತ. ಫಲವತ್ತಾದ ಭೂಮಿಯನ್ನು ರೈತರಿಂದ ಕಸಿದುಕೊಳ್ಳುವುದನ್ನ ಸರ್ಕಾರ ಬಿಡಲಿ ಎಂದರು.
ಬಿಬಿಎಂಪಿ ಕಸ ವಿಲೇವಾರಿಯೇ ಮಾಫಿಯಾ!: ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇನೆ. ಬಿಬಿಎಂಪಿ ಕಸ ವಿಲೇವಾರಿಯೇ ದೊಡ್ಡಮಾಫಿಯಾ, 8 ಟಕಗಳಲ್ಲಿ ಒಂದು ಖಾಸಗಿ ಇದ್ದು, ಅದು ದೊಡ್ಡಬಳ್ಳಾಪುರದಲ್ಲಿ ಇದೆ. ಇದು ಮಾತ್ರ ಯಾಕೆ ಖಾಸಗಿ?. ಎಲ್ಲ ಜನಪ್ರತಿನಿಧಿಗಳಿಗೆ ಬೆಂಗಳೂರಿನದ್ದೇ ಚಿಂತೆ, ನಮಗೆ ಮಾತ್ರ ಕಸದ ಚಿಂತೆಯಾಗಿದೆ. ಸರ್ಕಾರ ತೀರ್ಮಾನ ವಾಪಸ್ ಪಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು. ಕಸದ ಟಕ ಮತ್ತು ವೃಷಭಾವತಿ ಸಂಸ್ಕರಿತ ನೀರನ್ನು ತಾಲೂಕಿಗೆ ಬರಲು ಬಿಡುವುದಿಲ್ಲ. ಎತ್ತಿನಹೊಳೆಯ ನೀರನ್ನು ಮಾತ್ರ ತಾಲೂಕಿಗೆ ಹರಿಸಿ ಎಂದು ಶಾಸಕ ಧೀರಜ್ ಮುನಿರಾಜು ಒತ್ತಾಯಿಸಿದರು.
ನಗರಸಭೆ ಮತ್ತು ಕೈಗಾರಿಕಾ ತ್ಯಾಜ್ಯದ ಕಲುಷಿತ ನೀರಿನಿಂದ ಮಜರಾಹೊಸಹಳ್ಳಿ, ದೊಡ್ಡತುಮಕೂರು ಗ್ರಾಪಂ ವ್ಯಾಪ್ತಿಯಲ್ಲಿ ಅನೇಕ ರೋಗ ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ನಿರಂತರ ಹೋರಾಟ ಮಾಡಲಾಗುತ್ತಿದೆ. ಇನ್ನೂ ಬೆಂಗಳೂರಿನ ಕಲುಷಿತ ನೀರು ಬೇಡವೇ ಬೇಡ ಎತ್ತಿನಹೊಳೆ ನೀರನ್ನು ಮಾತ್ರ ಕೊಡಿ. | ತಿ.ರಂಗರಾಜು ಹಿರಿಯ ಮುಖಂಡ