

ಕೆಜಿಎಫ್: ಪ್ರತಿವರ್ಷ ರಾಜ್ಯದ ಜನ ಕಟ್ಟುವ 2 ಲಕ್ಷ ಕೋಟಿ ರೂ. ತೆರಿಗೆಯಲ್ಲಿ ನಾಲ್ಕನೇ ಒಂದು ಭಾಗವನ್ನು ಕೇಂದ್ರ ಸರ್ಕಾರ ನಮಗೆ ವಾಪಸ್ ನೀಡಿದರೂ, ರಾಜ್ಯದಲ್ಲಿನ ಬಡ ರೈತ, ಕೂಲಿ ಕಾರ್ಮಿಕರು, ಮನೆಗೆಲಸ ಮಾಡುವವರು, ಆಟೋ ಓಡಿಸುವವರು, ಕಟ್ಟಡ ಕಾರ್ಮಿಕರು ಸೇರಿ ಎಲ್ಲರ ಹಿತ ಕಾಯುವ ಮೂಲಕ ರಾಜ್ಯವನ್ನು ರಾಮರಾಜ್ಯವನ್ನಾಗಿ ಮಾಡಬಹುದು ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ನಗರದ ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮತ್ತು ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಉಳ್ಳವರ ಸಾಲಮನ್ನಾ ಮಾಡುವ ಮೂಲಕ ರಾಜ್ಯದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಕೇವಲ ಕೆಜಿಎಫ್ ಒಂದು ತಾಲೂಕಿಗೆ ಪ್ರತಿ ತಿಂಗಳು ಗೃಹಲಕ್ಷಿ$್ಮ ಯೋಜನೆಯಡಿ 9 ಕೋಟಿ ರೂ., ಅನ್ನಭಾಗ್ಯ ಯೋಜನೆಯಡಿ 1.55 ಲಕ್ಷ ಕುಟುಂಬಗಳಿಗೆ 2.65 ಕೋಟಿ ರೂ., ಶಕ್ತಿ ಯೋಜನೆಯಡಿ 2023ರ ಜೂನ್ನಿಂದ ಡಿ.24ರವರೆಗೆ ರಾಜ್ಯ ರಸ್ತೆ ಸಾರಿಗೆ ಬಸ್ಗಳಲ್ಲಿ ಉಚಿತವಾಗಿ ಮಹಿಳೆಯರು 1.58 ಕೋಟಿ ರೂ. ಮೊತ್ತದಷ್ಟು ಪ್ರಯಾಣಿಸಿದ್ದಾರೆ. ಅಲ್ಲದೇ ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಯಡಿ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುವ ಮೂಲಕ ಜನರ ಕಷ್ಟಗಳಿಗೆ ಕಾಂಗ್ರೆಸ್ ಸರ್ಕಾರ ಸದಾಕಾಲ ನಿಂತಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ಕೊಳವೆ ಬಾವಿ, ಸಾಲ, ವಾಹನ, ವೈಯಕ್ತಿಕ ಯೋಜನೆಗಳು ಸೇರಿ ವಿವಿಧ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಲಹಾ ಸಮಿತಿ ರಚನೆ ಮಾಡಲಾಗುವುದು. ಆ ಸಮಿತಿಗೂ ಕಾಂಗ್ರೆಸ್ಗಾಗಿ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಜವಾಬ್ದಾರಿ ವಹಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಧಾಕೃಷ್ಣ ರೆಡ್ಡಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಂತಹ ದೊಡ್ಡ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಜವಾಬ್ದಾರಿ ನೀಡಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಶಾಸಕಿ ರೂಪಕಲಾ ಅವರ ನಂಬಿಕೆ ಉಳಿಸಿಕೊಳ್ಳುವೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾಗಿ ರಾಮಕೃಷ್ಣಾರೆಡ್ಡಿ, ಶಿವಪ್ರಸಾದ್, ಸಂಪತ್ಕುಮಾರ್, ಗೋಪಿ, ರವಿ, ಮಾಧವಿ, ಇರಜಾಜ್ ಅಹ್ಮದ್, ವೇಣುಗೋಪಾಲ ಗೌಡ, ಸನಾವುಲ್ಲಾ, ವಿಷ್ಣುಕಾಂತನ್, ಕಾಂತಮ್ಮ, ಚಾರ್ಲ್ಸ್, ಜ್ಯೋತಿ ಪದಗ್ರಹಣ ಮಾಡಿದರು.
ಸಿಡಿಪಿಒ ರಾಜೇಶ್, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್, ಬೆಸ್ಕಾಂ ಎಇಇ ಹೇಮಲತಾ, ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಶಿವಣ್ಣ, ತಾಪಂ ಕಚೇರಿಯ ರಾಜಾರಾಂ, ದಿವ್ಯ, ಪುರುಷೋತ್ತಮ್, ಸೋಮಶೇಖರ್ ಇದ್ದರು.
ಭಾವುಕರಾದ ರೂಪಕಲಾ
ಶಾಸಕಿಯಾಗಿ ಎಷ್ಟು ದಿನ ಕೆಲಸ ಮಾಡುವುದಕ್ಕೆ ನನಗೆ ಅವಕಾಶ ನೀಡುತ್ತೀರೋ, ಆಶೀರ್ವಾದ ಮಾಡುತ್ತೀರೋ ಅಷ್ಟು ದಿನ ನಿಮ್ಮ ಮನೆ ಮಗಳಾಗಿ ಸೇವೆ ಮಾಡುತ್ತೇನೆ ಹೊರತು ಯಾರೊಬ್ಬರನ್ನೂ ಯಾಮಾರಿಸಿ, ನಿಮ್ಮ ಒಡವೆಯನ್ನು ತಿಂದು ಹೋಗುವವಳಲ್ಲ. ಒಂದು ವೇಳೆ ನಾನು ವಾಪಸ್ಸು ಹೋಗುವ ದಿನ ಏನಾದರೂ ಬಂದರೆ ಗೌರವಯುತವಾಗಿ ನಿಮ್ಮ ಬಳಿ ಬಂದು ಅರಿಶಿಣ &ಕುಂಕುಮ ತೆಗೆದುಕೊಂಡು ಹೋಗುವೆ ಎನ್ನುತ್ತ ರೂಪಕಲಾ ಕಾರ್ಯಕ್ರಮದಲ್ಲಿ ಭಾವುಕರಾದರು.