

ಉಳ್ಳಾಲ: ಅಪ್ರಾಪ್ತ ವಯಸ್ಕಳ ಮೇಲೆ ಆಕೆಯ ಮಲತಂದೆಯೇ ನಿರಂತರ ಅತ್ಯಾಚಾರ ಎಸಗಿರುವ ಅಮಾನುಷ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.
ಉಳ್ಳಾಲದ ಬಾಡಿಗೆ ಮನೆಯಲ್ಲಿ ವಾಸವಿರುವ ಅಮೀರ್(40) ಆರೋಪಿ. ಸಂತ್ರಸ್ತೆಗೆ ಮೂರು ವರ್ಷ ಪ್ರಾಯವಾಗಿದ್ದ ಸಂದರ್ಭ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಸಂತ್ರಸ್ತೆಗೆ ಆರು ವರ್ಷ ವಯಸ್ಸಾಗಿದ್ದಾಗ ಆಕೆಯ ತಾಯಿ ಪಾವೂರಿನ ಅಮೀರ್ ಎಂಬಾತನ ಜತೆ ಮದುವೆಯಾಗಿದ್ದರು.
ಸಂತ್ರಸ್ತೆಗೆ ಏಳು ವರ್ಷ ಪ್ರಾಯವಾಗಿದ್ದಾಗ ರಾತ್ರಿ ವೇಳೆ ತಾಯಿ ಜತೆ ಮಲಗಿದ್ದ ಸಂದರ್ಭ ಕಾಮುಕ ದೃಷ್ಟಿ ಬೀರಿದ್ದು ಆಕೆಯ ಬಾಯಿಗೆ ತಲೆದಿಂಬು ಇಟ್ಟು ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಬಳಿಕ ಸಂತ್ರಸ್ತೆ ಅಜ್ಜಿ ಮನೆಯಲ್ಲಿ ನೆಲೆಸಿದ್ದು ಅಲ್ಲಿಂದಲೇ ಶಾಲೆಗೆ ಹೋಗುತ್ತಿದ್ದಳು. ಕೆಲ ಸಮಯದ ಬಳಿಕ ತಾಯಿಯ ಒತ್ತಾಯಕ್ಕೆ ಮಣಿದ ಸಂತ್ರಸ್ತೆ ಮಲತಂದೆ ಇರುವಾಗಲೇ ಕುಂಪಲದ ಬಾಡಿಗೆ ಮನೆಗೆ ತಾಯಿಯ ಯೋಗ ಕ್ಷೇಮ ವಿಚಾರಿಸಲು ಬಂದು ಹೋಗುತ್ತಿದ್ದಳು. ಈ ವೇಳೆ ಆರೋಪಿ ಸಂತ್ರಸ್ತೆಗೆ ಹನ್ನೆರಡು ವರ್ಷ ತುಂಬುವವರೆಗೂ ನಿರಂತರ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.
ತನ್ನ ಮೇಲೆ ಮಲತಂದೆ ಎಸಗಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಲಕಿ ತಾಯಿಯಲ್ಲಿ ಹೇಳಿದರೂ ಮರ್ಯಾದೆಗೆ ಅಂಜಿ ವಿಷಯ ಬಹಿರಂಗಪಡಿಸಿರಲಿಲ್ಲ. ಅಕ್ಟೋಬರ್ 18ರಂದು ಅಪ್ರಾಪ್ತೆಯು ಮಾನಸಿಕವಾಗಿ ನೊಂದಿದ್ದರಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ವೈದ್ಯರು ಕೌನ್ಸೆಲಿಂಗ್ ನಡೆಸಿದಾಗ ತನ್ನ ಮೇಲೆ ಮಲತಂದೆ ನಿರಂತರ ಅತ್ಯಾಚಾರ ಎಸಗಿರುವ ಬಗ್ಗೆ ಬಾಯ್ಬಿಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.