ಹೆಚ್ಚಿನ ಸುರಕ್ಷಾ ಕ್ರಮ ಕೈಗೊಳ್ಳಿ

railway meeting
Published on

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಪಡೆ (ಆರ್​ಪಿಎಫ್), ರೈಲ್ವೆ ಪೋಲಿಸ್ ಹಾಗೂ ಇತರೆ ಭದ್ರತಾ ಅಧಿಕಾರಿಗಳು ಹೆಚ್ಚಿನ ಸುರಕ್ಷಾ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದರು.

ಹುಬ್ಬಳ್ಳಿ ರೈಲು ನಿಲ್ದಾಣದ ಪುನರಾಭಿವೃದ್ಧಿ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳ ಕುರಿತು ಅವರು ಮಂಗಳವಾರ ಸಭೆ ನಡೆಸಿದರು.

ಪ್ರಯಾಣಿಕರ ಹಾಗೂ ಅವರ ಸರಕುಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಕಟ್ಟುನಿಟ್ಟಿನ ಆದೇಶ ನೀಡಿದರಲ್ಲದೆ, ಕಳ್ಳತನದ ಪ್ರಕರಣಗಳ ತನಿಖೆಯನ್ನು ಸೂಕ್ತ ಸಮಯದಲ್ಲಿ ಕೈಗೊಂಡು ಸ್ವತ್ತು, ಹಣ ಕಳೆದುಕೊಂಡವರಿಗೆ ಆದಷ್ಟು ಬೇಗ ನ್ಯಾಯ ದೊರಕಿಸಬೇಕೆಂದು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.

ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಹೊಸದಾಗಿ ನೇಮಕಾತಿ ಹೊಂದಿದ ಡಿ ಗ್ರುಪ್ ಅಭ್ಯರ್ಥಿಗಳಿಗೆ ಬೇಗನೇ ನೇಮಕಾತಿ ಆದೇಶ ಪತ್ರ ನೀಡಬೇಕು. ವಾರದಲ್ಲಿ 2 ಬಾರಿ ಸಂಚರಿಸುವ ಹುಬ್ಬಳ್ಳಿ-ವಾರಾಣಾಸಿ ಎಕ್ಸ್​ಪ್ರೆಸ್ ರೈಲಿಗೆ ಕೆಲವು ನಿಲ್ದಾಣಗಳಲ್ಲಿ ನಿಲುಗಡೆ, ಕುಂದಗೋಳ ಮೇಲ್ಸೇತುವೆ ಪಕ್ಕದ ಸರ್ವಿಸ್ ರಸ್ತೆ ನಿರ್ವಣ, ಅಣ್ಣಿಗೇರಿ ನಿಲ್ದಾಣದ ಹತ್ತಿರ ಮೇಲ್ಸೇತುವೆ ನಿರ್ವಣ, ಧಾರವಾಡ ವಿವಿ ಹಾಗೂ ತಪೋವನದ ಹತ್ತಿರ ಕೆಳಸೇತುವೆ ನಿರ್ವಣ, ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿದ್ದ ರೈಲ್ವೆ ಓಡಾಟಗಳ ಪುನರಾರಂಭ ಇತ್ಯಾದಿ ವಿಷಯಗಳ ಕುರಿತು ರ್ಚಚಿಸಲಾಯಿತು.

ಶಾಸಕ ಮಹೇಶ ಟೆಂಗಿನಕಾಯಿ, ನೈಋತ್ಯ ರೈಲ್ವೆ ಮಹಾಪ್ರಭಂದಕ ಸಂಜೀವ ಕಿಶೋರ, ರೈಲ್ವೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net