

ವಿಜಯವಾಣಿ ಸುದ್ದಿಜಾಲ ಕಾರ್ಕಳ(ಉಡುಪಿ)
ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಪಶ್ಚಿಮಘಟ್ಟದ ತಪ್ಪಲಿನ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ಮತ್ತೆ ನಕ್ಸಲ್ ಹೆಜ್ಜೆ ಕಾಣಿಸಿಕೊಂಡ ಶಂಕೆ ವ್ಯಕ್ತವಾಗಿದೆ. ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡ ಹಾಡಹಗಲೇ ಕಾಣಿಸಿಕೊಂಡಿರುವ ಬಗ್ಗೆ ಗ್ರಾಮದ ಜನರು ಮಾಹಿತಿ ನೀಡಿದ್ದು, ಕೂಂಬಿಂಗ್ ಆರಂಭಿಸಲಾಗಿದೆ. ಈದು ಗ್ರಾಮದ ಬೊಲ್ಲೆಟ್ಟು ಎಂಬಲ್ಲಿ ಕಾಡುತ್ಪತ್ತಿ ಸಂಗ್ರಹಿಸಲು ತೆರಳಿದ್ದ ಸ್ಥಳೀಯರಿಗೆ ಅಲ್ಲಿನ ಮುಸ್ಲಿಂ ಕಾಲನಿ ಬಳಿಯ ಬಂಡೆಕಲ್ಲು ಸಮೀಪ ನಕ್ಸಲರು ಕಾಣಿಸಿದ್ದಾಗಿ ಮಾಹಿತಿ ನೀಡಿದ್ದರು. ಹೀಗಾಗಿ ಪಶ್ಚಿಮಘಟ್ಟದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಪ್ರಾರಂಭಗೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸುಮಾರು 30ರಿಂದ 40ವರ್ಷದ ಯುವಕರ ತಂಡ ಇದಾಗಿದ್ದು, ಶಸ್ತ್ರಸಜ್ಜಿತವಾಗಿದ್ದರು ಎನ್ನಲಾಗಿದೆ. ಸುದ್ದಿ ಹಬ್ಬುತ್ತಿದ್ದಂತೆ ಗ್ರಾಮದ ಜನ ಭಯಭೀತರಾಗಿದ್ದಾರೆ.
2002ರಲ್ಲಿ ಪಶ್ಚಿಮಘಟ್ಟದಲ್ಲಿ ನಕ್ಸಲ್ ಚಟುವಟಿಕೆ ಆರಂಭವಾಗಿತ್ತು. 2003ರಲ್ಲಿ ಈದು ಗ್ರಾಮದ ಬೊಲ್ಲೊಟ್ಟುನಲ್ಲಿ ಹಾಜಿಮಾ ಮತ್ತು ಪಾರ್ವತಿ ಎಂಬ ಇಬ್ಬರು ನಕ್ಸಲರನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು. 2010ರ ಮಾ.1ರಂದು ಮೈರೊಳ್ಳಿಯಲ್ಲಿ ನಕ್ಸಲ್ ವಸಂತ ಗೌಡ ಎಂಬಾತನ ಎನ್ಕೌಂಟರ್ ಆಗಿದ್ದರೆ, ಮತ್ತೆ 2011ರ ಡಿಸೆಂಬರ್ನಲ್ಲಿ ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕಾಗಿ ತೆಂಗುಮಾರ್ ಎಂಬಲ್ಲಿ ಗುಂಡಿ ಸದಾಶಿವ ಗೌಡ ಅವರನ್ನು ನಕ್ಸಲರು ಬರ್ಬರವಾಗಿ ಹತ್ಯೆ ಮಾಡಿದ್ದರು. ನಂತರದ ದಿನಗಳಲ್ಲಿ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಇದೀಗ ಮತ್ತೆ ಈದು ಗ್ರಾಮದಲ್ಲಿ ಆರಂಭಗೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಎಎನ್ಎಫ್ ತಂಡ ಪಶ್ಚಿಮಘಟ್ಟದ ಅರಣ್ಯ ಭಾಗವಾದ ಈದು ಗ್ರಾಮದ ಮುಸ್ಲಿಂ ಕಾಲನಿ ಬಂಡೆಕಲ್ಲು ಸುತ್ತಮುತ್ತ ಗುರುವಾರ ಬೃಹತ್ ಕೂಂಬಿಂಗ್ ಆಪರೇಷನ್ ನಡೆಸಿದೆ. ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನಲಾಗಿದ್ದ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಯಾವುದೇ ಸುಳಿವು, ಕುರುಹು ಕಂಡುಬಂದಿಲ್ಲ ಎನ್ನಲಾಗಿದೆ.
ಫೆಬ್ರವರಿಯಲ್ಲಿ ಉಡುಪಿ ಜಿಲ್ಲೆಯ ಬೈಂದೂರಿನ ಜಡ್ಕಲ್, ಮುದೂರು, ಭಾಗದಲ್ಲಿ ಶಂಕಿತ ನಕ್ಸಲರು ಕಂಡುಬಂದಿದ್ದರು. ಇತ್ತೀಚೆಗೆ ಕೇರಳ, ಕರ್ನಾಟಕದ ಗಡಿಭಾಗದ ಅಲ್ಲಲ್ಲಿ ನಕ್ಸಲ್ ಚಲನವಲನ ಕಂಡುಬಂದಿತ್ತು. ಕೇರಳದ ವಯನಾಡ್ ಬಳಿಕ ಕೊಡಗು, ಸುಳ್ಯದ ಸಂಪಾಜೆ ಬಳಿಯಲ್ಲೂ ನಕ್ಸಲ್ ಚಲನವಲನ ಕಾಣಿಸಿಕೊಂಡಿದ್ದು, ಇದೀಗ ಕಾರ್ಕಳದ ಈದು ಗ್ರಾಮದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ-ಕೊಡಗು ಗಡಿಭಾಗದ ಮಡಿಕೇರಿಯ ಕಡಮಕಲ್ಲು ಬಳಿಯ ಕೂಜಿಮಲೆ ವ್ಯಾಪ್ತಿಯಲ್ಲಿನ ರಬ್ಬರ್ ಎಸ್ಟೇಟ್ನಲ್ಲಿ ಮಾ.16ರಂದು ನಕ್ಸಲರು ಓಡಾಟ ನಡೆಸಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರು. ದಿನಸಿ ಖರೀದಿಸಿ ತೆರಳಿದ ಶಂಕಿತ ನಕ್ಸಲರು ಕಾಡುದಾರಿಯಲ್ಲಿ ಮರೆಯಾಗಿದ್ದಾರೆ. ನಾಲ್ಕೈದು ತಿಂಗಳಿನಿಂದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ನಕ್ಸಲ್ ತಂಡ ಒಂದು ಬಾರಿ ಬೈಂದೂರು ಭಾಗದಲ್ಲಿ ಕಾಣಿಸಿಕೊಂಡರೆ, ಇನ್ನೊಂದು ಬಾರಿ ಕೇರಳ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದೇ ತಂಡ ಕಾರ್ಕಳ, ಶೃಂಗೇರಿ ಕಡೆ ಸಂಚರಿಸಿರುವ ಸಾಧ್ಯತೆ ಹೆಚ್ಚಾಗಿವೆ. ಕೇರಳದಿಂದ ಕೊಡಗು, ಮಡಿಕೇರಿ ಮಾರ್ಗವಾಗಿ ಬಿಸಿಲೆ ಘಾಟಿ, ಚಾರ್ಮಾಡಿ, ಕುದುರೆಮುಖ ಮಾರ್ಗವಾಗಿ ಕಾರ್ಕಳ, ಹೆಬ್ರಿ, ಶೃಂಗೇರಿ, ಕುಂದಾಪುರ ಕಡೆಗೆ ಆಗಾಗ್ಗೆ ಓಡಾಡುತ್ತಿರುವ ಬಗ್ಗೆ ಸಂದೇಹ ವ್ಯಕ್ತವಾಗುತ್ತಿದೆ. ಕಡಮಕಲ್ಲಿನಿಂದ ಸುಬ್ರಹ್ಮಣ್ಯ ಬಿಸಿಲೆ ಘಾಟಿ ಕಾಡುದಾರಿಯಾಗಿ ಕಾರ್ಕಳ ಕಡೆಗೆ ಬಂದಿರಬಹುದು ಎಂದು ಶಂಕಿಸಲಾಗಿದೆ.