

ವಿರಾಜಪೇಟೆ: ಗ್ರಾಮೀಣಾ ಪ್ರದೇಶಗಳಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದು, ಸರ್ಕಾರದ ಅನುದಾನವನ್ನು ಬಳಸಿಕೊಂಡು ಹಂತ ಹಂತವಾಗಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಶಾಸಕ ಎ.ಎಸ್.ಪೊನ್ನಣ್ಣ ಭರವಸೆ ನೀಡಿದರು.
ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ಕರಿನೆರವಂಡ ಕುಟುಂಬಸ್ಥರ ಗುರುಮಠಕ್ಕೆ ತೆರಳುವ ಸಂಪರ್ಕ ರಸ್ತೆ ( ಕಾಂಕ್ರೀಟ್ ರಸ್ತೆ)ಯನ್ನು ಬುಧವಾರ ಉದ್ಘಾಟನೆ ಮಾಡಿ ಕರಿನೆರವಂಡ ಕುಟುಂಬಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹಲವಾರು ಸಮಸ್ಯೆಗಳಿವೆ. ಅಲ್ಲದೆ ಅಧಿಕ ಮಳೆಯಾದ ಕಾರಣ ರಸ್ತೆಗಳು ಹಾಳಾಗಿವೆ. ಕುಡಿಯುವ ನೀರು ಮತ್ತು ಇತರ ಸಮಸ್ಯೆಗಳೂ ಕಾಡುತ್ತಿದೆ. ಗ್ರಾಮಸ್ಥರು ಸಮಸ್ಯೆ ಕುರಿತು ಅರ್ಜಿ ಸಲ್ಲಿಸುತಿದ್ದಾರೆ. ಇವುಗಳ ತ್ವರಿತ ವಿಲೇವಾರಿಗೆ ಕ್ರಮ ವಹಿಸಲಾಗಿದೆ. ಸರ್ಕಾರವು ಬಿಡುಗಡೆಗೊಳಿಸುವ ಅನುದಾನದ ಆಧಾರದ ಮೇಲೆ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಕಾಂಕ್ರೀಟ್ ರಸ್ತೆ ಉದ್ಘಾಟನೆ ಮಾಡಿದ ಬಳಿಕ ಕರಿನೆರವಂಡ ಗುರುಮಠಕ್ಕೆ ತೆರಳಿದ ಶಾಸಕರು, ಕುಟುಂಬದ ಹಿರಿಯ ಮತ್ತು ಕಿರಿಯ ಸದಸ್ಯರಿಂದ ಸನ್ಮಾನ ಸ್ವೀಕರಿಸಿದರು.
ಕರಿನೆರವಂಡ ಮಿಟ್ಟು ಅಯ್ಯಪ್ಪ ಮಾತನಾಡಿ, ಸುಮಾರು 20 ವರ್ಷಗಳಿಂದ ಗುರುಮಠಕ್ಕೆ ತೆರಳುವ ಸಂಪರ್ಕ ರಸ್ತೆ ದುಸ್ಥಿತಿಯಲ್ಲಿತ್ತು. ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ಶಾಸಕರಿಗೆ ಅರ್ಜಿ ಸಲ್ಲಿಸಲಾಗಿತ್ತು. ಶಾಸಕರು ಅರ್ಜಿಯನ್ನು ಪರಿಗಣಿಸಿ ಐದು ಲಕ್ಷ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಿ ಇದೀಗಲೋಕಾರ್ಪಣೆ ಮಾಡಿದ್ದಾರೆ ಎಂದು ಹೇಳಿದರು.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆಫ್ರೀ ಉತ್ತಪ್ಪ, ಸದಸ್ಯರಾದ ಪ್ರಶಾಂತ್ ಉತ್ತಪ್ಪ, ಎಂ.ಎಂ.ಇಸ್ಮಾಯಿಲ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಗುತ್ತಿಗೆದಾರಾದ ಬಲ್ಟಿಕಾಳಂಡ ರಂಜಿ, ಕರಿನೇರವಂಡ ಕುಟುಂಬಸ್ಥರಾದ ಜಾಲು ಚೆಂಗಪ್ಪ, ಜಿತನ್, ಡ್ಯಾನಿ, ಸಂಕೇತ್ ಕಾಳಯ್ಯ ಇತರರಿದ್ದರು.