ಸ್ಟೀಲ್ ಬ್ರಿಡ್ಜ್ ಪೂರ್ಣಕ್ಕೆ ಹಸಿರುನಿಶಾನೆ

gh
Published on

|ಸತೀಶ್ ಕಂದಗಲ್​ಪುರ ಬೆಂಗಳೂರು

ಶಿವಾನಂದ ವೃತ್ತದಲ್ಲಿ ನಿರ್ವಣವಾಗುತ್ತಿರುವ ಉಕ್ಕಿನ ಮೇಲ್ಸೇತುವೆಯ ಡೌನ್ ರ‍್ಯಾಂಪ್ ನಿರ್ಮಾಣ ವೈಜ್ಞಾನಿಕವಾಗಿದೆಯೇ ಎಂಬ ಬಗ್ಗೆ ತಜ್ಞರಿಂದ ವರದಿ ಪಡೆದು ಪರಿಶೀಲಿಸಿದ ಹೈಕೋರ್ಟ್, ಕಾಮಗಾರಿ ಮುಂದುವರಿಸಲು ಅನುಮತಿ ನೀಡಿದೆ.

ನಗರದ ರೇಸ್​ಕೋರ್ಸ್ ರಸ್ತೆಯಿಂದ ಶಿವಾನಂದ ವೃತ್ತದ ಮೂಲಕ ನೆಹರು ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಹರೆಕೃಷ್ಣ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ 2017ರ ಜೂನ್​ನಲ್ಲಿ ಉಕ್ಕಿನ ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಯಿತು. ಕೇವಲ 9 ತಿಂಗಳಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿ ವಿವಿಧ ಅಡತಡೆಗಳಿಂದಾಗಿ 5 ವರ್ಷಗಳಾದರೂ ಪೂರ್ಣಗೊಂಡಿಲ್ಲ. ಮರಗಳ ತೆರವು, ಭೂಸ್ವಾಧೀನ, ಮೇಲ್ಸೇತುವೆಯ ವಿಸ್ತೀರ್ಣ ಹೆಚ್ಚಳ ಹಾಗೂ ಗುತ್ತಿಗೆದಾರರಿಂದ ಕಾಮಗಾರಿ ದರ ಪರಿಷ್ಕರಣೆ ಸೇರಿ ವಿವಿಧ ಕಾರಣಗಳಿಂದ ನಿರ್ಮಾಣ ಕಾರ್ಯ ವಿಳಂಬವಾಗಿತ್ತು. ಇನ್ನು ಮೇಲ್ಸೇತುವೆಯಿಂದ ಶೇಷಾದ್ರಿಪುರ ಕಡೆಗೆ ಇಳಿಜಾರು ನಿರ್ವಿುಸಲು ಭೂಸ್ವಾಧೀನಕ್ಕೆ ಸ್ಥಳೀಯರಿಂದ 40 ಕೋಟಿ ರೂ.ಗೆ ಬೇಡಿಕೆ ಬಂದಿತು. ಇಷ್ಟೊಂದು ವೆಚ್ಚ ಪಾವತಿಸಲಾಗದೆ ಡೌನ್​ರ್ಯಾಂಪ್​ನ ವಿನ್ಯಾಸವನ್ನು ಬದಲಿಸಲಾಯಿತು. ಈ ವಿನ್ಯಾಸದ ಬಗ್ಗೆ ಸಾರ್ವಜನಿಕರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಐಐಎಸ್​ಸಿಯಿಂದ ವರದಿ: ಉಕ್ಕಿನ ಮೇಲ್ಸೇತುವೆಯ ರೈಲ್ವೆ ಅಂಡರ್​ಪಾಸ್ ಬದಿಯಲ್ಲಿ ಡೌನ್​ರ್ಯಾಂಪ್ ಶೇ. 5.5 ಮಾದರಿಯಲ್ಲಿ ನಿರ್ವಿುಸಲು ಭೂಸ್ವಾಧೀನಕ್ಕೆ ಸಮಸ್ಯೆ ಎದುರಾಯಿತು. ವೆಚ್ಚ ತಗ್ಗಿಸುವ ದೃಷ್ಟಿಯಿಂದ ಬಿಬಿಎಂಪಿ ಡೌನ್​ರ್ಯಾಂಪ್​ನ ವಿನ್ಯಾಸದಲ್ಲಿ ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್​ಸಿ) ಅನ್ವಯ ಇಳಿಜಾರನ್ನು ಶೇ.6.6 ಮಾಡಲು ಮರು ಯೋಜಿಸಿತು. ಕೆಲವರು ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಸರ್ಜಿ ಸಲ್ಲಿಸಿದರು. ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ವೈಜ್ಞಾನಿಕ ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್​ಸಿ)ಗೆ ಸೂಚಿಸಿತ್ತು. ಐಐಎಸ್​ಸಿ ನೀಡಿದ ವರದಿಯಲ್ಲಿ ಪಾಲಿಕೆಯು ಮರು ಯೋಜಿಸಿದ ಡೌನ್​ರ್ಯಾಂಪ್ ನಿರ್ಮಾಣ ಯೋಗ್ಯವಾಗಿದೆ ಎಂದು ತಿಳಿಸಲಾಗಿದೆ. ಹೀಗಾಗಿ, ಮೇಲ್ಸೇತುವೆ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ವಿಭಾಗೀಯ ಪೀಠ ಒಪ್ಪಿಗೆ ನೀಡಿದೆ ಎಂದು ಪಾಲಿಕೆ ಮುಖ್ಯ ಇಂಜಿನಿಯರ್ ಲೋಕೇಶ್ ತಿಳಿಸಿದರು.

ಶೇ. 90 ಕಾಮಗಾರಿ ಪೂರ್ಣ: ಗ್ರೇಡ್ ಸಪರೇಟರ್ ಸೇರಿ ಒಟ್ಟಾರೆ 493 ಮೀ. ಉದ್ದದ ಮೇಲ್ಸೇತುವೆಯ ನಿರ್ಮಾಣ ಕಾರ್ಯ ಶೇ.90 ಪೂರ್ಣಗೊಂಡಿದೆ. ಶೇಷಾದ್ರಿಪುರ ಕಡೆಗೆ ಸಂರ್ಪಸುವ ಡೌನ್​ರ್ಯಾಂಪ್ ಬಳಿ ಕಾಲುವೆ ಅಭಿವೃದ್ಧಿ ಮತ್ತು ಇಳಿಜಾರು ರಸ್ತೆ ನಿರ್ವಿುಸಿ ಡಾಂಬರೀಕರಣ ಮಾಡುವುದು ಮಾತ್ರ ಬಾಕಿಯಿದೆ. ಈಗ ಯಂತ್ರೋಪಕರಣಗಳು ಮತ್ತು ಕಾರ್ವಿುಕರು ಎಲ್ಲವೂ ಲಭ್ಯವಿದ್ದು, ಕಾಮಗಾರಿ ಪೂರ್ಣಗೊಳಿಸಲು ಅಂದಾಜು 30 ದಿನಗಳು ಬೇಕಾಗುತ್ತದೆ. ಈ ಅವಧಿಯಲ್ಲಿ ಮಳೆ ಬಂದರೂ ಒಂದು ವಾರ ತಡವಾಗಬಹುದು. ಒಟ್ಟಾರೆ, ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ ಮೇಲೆ ಆ.15ರಂದು ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಗುರಿ ಹೊಂದಲಾಗಿದೆ ಎಂದು ಪಾಲಿಕೆ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.

ಯೋಜನೆ ವೆಚ್ಚ 3 ಪಟ್ಟು ಹೆಚ್ಚಳ: ಬಿಬಿಎಂಪಿಯು 2017ರಲ್ಲಿ ಯೋಜನೆ ರೂಪಿಸಿದಂತೆ 326 ಮೀ. ಉದ್ದದ ಗ್ರೇಡ್ ಸಪರೇಟರ್ ನಿರ್ವಣಕ್ಕೆ 19.85 ಕೊಟಿ ರೂ. ವೆಚ್ಚ ನಿಗದಿಗೊಳಿಸಲಾಗಿತ್ತು. ತದನಂತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಇತರ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರೇಡ್ ಸಪರೇಟರ್ ಉದ್ದವನ್ನು 493 ಮೀ.ಗೆ ವಿಸ್ತರಿಸಲಾಯಿತು. ಇದರೊಂದಿಗೆ ಕಂಬಗಳ (ಪಿಯರ್) ಸಂಖ್ಯೆಯನ್ನು 6ರಿಂದ 16ಕ್ಕೆ ಹೆಚ್ಚಿಸಲಾಯಿತು. ಆಗ ಯೋಜನಾ ವೆಚ್ಚವನ್ನು 2018ರ ಜುಲೈನಲ್ಲಿ 42.45 ಕೋಟಿ ರೂ.ಗೆ ಹೆಚ್ಚಿಸಲಾಯಿತು. ಪುನಃ ವಿವಿಧ ಗಡುವುಗಳ ವಿಸ್ತರಣೆಯ ನಂತರವೂ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಸಾಮಗ್ರಿಗಳ ಬೆಲೆ ಏರಿಕೆಯನ್ನು ಪರಿಗಣಿಸಿ ಮತ್ತೊಮ್ಮೆ ಯೋಜನಾ ವೆಚ್ಚವನ್ನು 60 ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ.

ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇ ತುವೆ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ವಿಭಾಗೀಯ ಪೀಠ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಕೆಲಸವನ್ನು ಪುನಾರಂಭಿಸಲಾಗಿದೆ. 30 ಕೆಲಸದ ದಿನಗಳನ್ನು ಕಾಮಗಾರಿ ಪೂರ್ಣಗೊಳಿಸಿ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ.

| ಲೋಕೇಶ್ ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net