

ಯರಗಟ್ಟಿ: ಅಕ್ರಮವಾಗಿ ಕಳ್ಳಬಟ್ಟಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಮುರಗೋಡ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ. ಸಮೀಪದ ಹಿರೇಬುದನೂರ ಗ್ರಾಮದ ತಾಪಂ ಮಾಜಿ ಸದಸ್ಯ ಸಿದ್ದಪ್ಪ ಬೀರಪ್ಪ ಸೂರಣ್ಣವರ (44) ಬಂಧಿತ ವ್ಯಕ್ತಿ.
ಲಾಕ್‌ಡೌನ್ ನಡುವೆಯೂ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮುರಗೋಡ ಠಾಣೆ ಪಿಎಸ್‌ಐ ಪ್ರವೀಣ ಗಂಗೋಳಿ ನೇತೃತ್ವದಲ್ಲಿ ದಾಳಿ ನಡೆಸಿ, ಹಿರೇಬುದನೂರ-ಚಚಡಿ ರಸ್ತೆಯಲ್ಲಿ ಬುಲೆರೋ ವಾಹನದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಿದ್ದಾರೆ. ಆತನಿಂದ 14, 400 ರೂ. ಮೌಲ್ಯದ 72 ಲೀಟರ್ ಕಳ್ಳಬಟ್ಟಿ ಮದ್ಯ ಹಾಗೂ ವಾಹನ ವಶಪಡಿಸಿಕೊಳ್ಳಲಾಗಿದೆ. ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.