

ಮಳವಳ್ಳಿ: ತಾಲೂಕಿನ ರಾಗಿಬೊಮ್ಮನಹಳ್ಳಿಯಲ್ಲಿ ಮಂಗಳವಾರ ರಾತ್ರಿ ವಿದ್ಯುತ್ ಕಂಬದಲ್ಲಿದ್ದ ಪರಿವರ್ತಕವನ್ನು ಕೆಳಗಿಳಿಸಿ ಒಳಗಿನ ಕಾಪರ್ ತಂತಿಯ ಕಾಯಲ್ ಬಿಚ್ಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಗ್ರಾಮದ ನಾಗರಾಜಪ್ಪ ಅವರು ಫ್ಲೋರ್ ಮಿಲ್ ನಡೆಸಲು ಸೆಸ್ಕ್‌ನಿಂದ ಅನುಮತಿ ಪಡೆದು ಹಾಕಿಸಿಕೊಂಡಿದ್ದ ಪರಿವರ್ತಕ ಇದಾಗಿದೆ. ಗ್ರಾಮದ ಮಾರ್ಗವಾಗಿ ಹಾದುಹೋಗಿರುವ ತಿ.ನರಸೀಪುರ ಮುಖ್ಯರಸ್ತೆ ಬದಿಯಲ್ಲೇ ಕಳ್ಳತನ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಪರಿವರ್ತಕಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಕಡಿತಗೊಳಿಸಿ ನಂತರ ಕೆಳಗಿಳಿಸಿಕೊಂಡಿದ್ದು, ಸ್ಥಳದಲ್ಲೇ ಸ್ಪಾೃನರ್‌ಗಳನ್ನು ಬಳಸಿ ಪರಿವರ್ತಕದ ಮೇಲ್ಭಾಗದ ಕ್ಯಾಪ್ ತೆರೆದು ಒಳಗಿನ ಕಾಪರ್ ತೆಗೆದುಕೊಂಡಿರುವ ಖದೀಮರ ತಂಡ, ವ್ಯವಸ್ಥಿತವಾಗಿ ಕಳ್ಳತನ ನಡೆಸಿದೆ.
ಟಿಸಿಯಲ್ಲಿನ ಕಾಪರ್ ಕಳುವಾಗಿರುವ ಬಗ್ಗೆ ಸೆಸ್ಕ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿ ಸ್ಥಳಕ್ಕಾಗಮಿಸಿದ ಅಧಿಕಾರಿಗಳು, ನಾಗರಾಜಪ್ಪ ಅವರನ್ನೇ ಪಟ್ಟಣದ ಕಚೇರಿ ಕರೆಸಿಕೊಂಡು ಮಾಹಿತಿ ಪಡೆದಿದ್ದಾರೆ. ಸೆಸ್ಕ್ ಅಧಿಕಾರಿಗಳ ನಡೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
.