

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್- ಉಪ ಮೇಯರ್ ಮುಂದಿನ ಅವಧಿಯ ಚುನಾವಣೆಗೆ ಧಾರವಾಡ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಸಕ್ತ ಅವಧಿಯ ಮೇಯರ್ ರಾಮಪ್ಪ ಬಡಿಗೇರ ಅವರ ಅವಧಿ ಜೂನ್ 28ಕ್ಕೆ ಮುಕ್ತಾಯಗೊಳ್ಳುತ್ತದೆ. ನಂತರ ಅವಧಿಯ ಮೇಯರ್ ಸ್ಥಾನದ ಮೀಸಲಾತಿ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯರಿಗೆ ನಿಗದಿಯಾಗಿತ್ತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಈ ಬಾರಿಯ ಐದು ಅವಧಿಯಲ್ಲಿ ಮೇಯರ್ ಸ್ಥಾನ ಒಂದು ಬಾರಿ ಮಾತ್ರ ಸಾಮಾನ್ಯರಿಗೆ ನಿಗದಿಯಾಗಿತ್ತು. ಇದನ್ನು ಪ್ರಶ್ನಿಸಿ ಪಾಲಿಕೆಯ ಬಿಜೆಪಿ ಸದಸ್ಯ ಶಿವು ಮೆಣಸಿನಕಾಯಿ ಹೈ ಕೋರ್ಟ್ ಮೆಟ್ಟಿಲೇರಿದ್ದರು.
ಮಂಗಳೂರು ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈ ಬಾರಿಯ ಅಧಿಕಾರದ ಅವಧಿಯಲ್ಲಿ ಮೂರು ಬಾರಿ ಸಾಮಾನ್ಯರಿಗೆ ಮೇಯರ್ ಸ್ಥಾನ ಮೀಸಲಿಡಲಾಗಿದೆ. ಆದರೆ, ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆ ಹುಬ್ಬಳ್ಳಿ-ಧಾರವಾಡಕ್ಕೆ ಕೇವಲ ಒಂದು ಬಾರಿ ಮಾತ್ರ ಸಾಮಾನ್ಯರಿಗೆ ಮೇಯರ್ ಸ್ಥಾನ ಮೀಸಲಿಡಲಾಗಿದೆ ಎಂದು ದೂರಿದ್ದರು.
ಬಿಜೆಪಿ ಆಡಳಿತದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮೊದಲ ಅವಧಿಗೆ ಮಾತ್ರ ಸಾಮಾನ್ಯರಿಗೆ ಮೇಯರ್ ಸ್ಥಾನ ಮೀಸಲಿಡಲಾಗಿತ್ತು. ಆ ಅವಧಿಯಲ್ಲಿ ಈರೇಶ ಅಂಚಟಗೇರಿ ಮಹಾಪೌರರಾಗಿದ್ದರು. ಎರಡನೇ ಅವಧಿಗೆ ಸಾಮಾನ್ಯ ಮಹಿಳೆ ಮೀಸಲಾತಿ ಇದ್ದು, ಆ ಅವಧಿಯಲ್ಲಿ ವೀಣಾ ಬರದ್ವಾಡ ಮೇಯರ್ ಗೌನ್ ಧರಿಸಿದ್ದರು. ಮೂರನೇ ಅವಧಿಗೆ ಒಬಿಸಿ ಎ ಮೀಸಲಾತಿ ಅಡಿ ರಾಮಪ್ಪ ಬಡಿಗೇರ ಅವರು ಮಹಾಪೌರರಾಗಿದ್ದರು. ಈ ಬಾರಿಯ 4ನೇ ಅವಧಿಗೆ ಸಾಮಾನ್ಯ ಮಹಿಳೆಗೆ ಮಹಾಪೌರರ ಸ್ಥಾನ ಮೀಸಲಾಗಿದ್ದರೆ, 5ನೇ ಅವಧಿಗೆ ಎಸ್ಸಿ ಮಹಿಳೆಗೆ ಮೀಸಲಾತಿ ನಿಗದಿಯಾಗಿತ್ತು.
ಮಂಗಳೂರು, ಬೆಳಗಾವಿಯಲ್ಲಿ ಸಾಮಾನ್ಯರಿಗೆ ಮೂರು ಬಾರಿ ಮೇಯರ್ ಸ್ಥಾನ ನೀಡಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮಾತ್ರ ಒಂದು ಬಾರಿ ಸಾಮಾನ್ಯ ಮೀಸಲಾತಿ ನೀಡುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ಶಿವು ಮೆಣಸಿನಕಾಯಿ ಹೈ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಹೈ ಕೋರ್ಟ್, ಹು-ಧಾ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಗೆ ತಡೆಯಾಜ್ಞೆ ನೀಡಿ ಜೂ. 10ರಂದು ಆದೇಶ ಹೊರಡಿಸಿದೆ.