

ನರಗುಂದ: ಬೆಳ್ಳೇರಿಯಲ್ಲಿರುವ ಕೃಷಿ ಡಿಪ್ಲೊಮಾ ಕಾಲೇಜ್ ಅನ್ನು ಮುಚ್ಚುತ್ತಿರುವುದು ಈ ಭಾಗದ ರೈತರಲ್ಲಿ ಅತೀವ ನೋವನ್ನುಂಟು ಮಾಡಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಕೃಷಿಯಲ್ಲಿ ಸಂಶೋಧನೆ ಮಾಡಬಯಸುವ ವಿದ್ಯಾರ್ಥಿಗಳಿಗೆ ಇಂದೊಂದು ಬಡವರ ಆಶಾಕಿರಣದಂತಿತ್ತು. ಹೀಗಾಗಿ ಸರ್ಕಾರ ಇಲ್ಲಿನ ಕೃಷಿ ಡಿಪ್ಲೊಮಾ ಕೇಂದ್ರವನ್ನು ಬೆಳ್ಳೇರಿಯಲ್ಲಿಯೇ ಉಳಿಸಬೇಕು ಎಂದು ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಆಗ್ರಹಿಸಿದರು.
ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡೋತ್ಸವ ಉಪನ್ಯಾಸ ಮಾಲೆ-4ರ ಕಾರ್ಯಕ್ರಮದಲ್ಲಿ ‘ರೈತರ ಸಮಸ್ಯೆ ಮತ್ತು ಸವಾಲುಗಳು’ ಕುರಿತು ಅವರು ಮಾತನಾಡಿದರು.
ಭಾರತ ದೇಶವು ಶೇ. 75ರಷ್ಟು ವ್ಯವಸಾಯ ಭೂಮಿ ಹೊಂದಿದೆ. ರೈತರು ಈ ದೇಶದ ಜೀವನಾಡಿ ಇದ್ದಂತೆ. ಅವರಿಗೆ ಸರಿಯಾದ ತಿಳಿವಳಿಕೆಯಿಲ್ಲದ ಕಾರಣ ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾನೆ. ಇದಕ್ಕೆ ಪೂರಕವೆಂಬಂತೆ ಬೆಳ್ಳೇರಿಯಲ್ಲಿರುವ ಕೃಷಿ ಡಿಪ್ಲೊಮಾ ಕೇಂದ್ರ ರೈತರು ಹಾಗೂ ಅವರ ಮಕ್ಕಳಿಗೆ ಕೃಷಿ ಬಗ್ಗೆ ತಿಳಿವಳಿಕೆ ನೀಡುವ ಮುಖ್ಯ ಕೇಂದ್ರವಾಗಿತ್ತು. ಆದರೀಗ ಇದನ್ನು ಮುಚ್ಚಲು ಮುಂದಾಗಿರುವುದು ಬೇಸರದ ಸಂಗತಿ. ಸರ್ಕಾರ, ಈ ಕಾಲೇಜಿಗೆ ಬೇಕಾಗುವ ಮೂಲಸೌಲಭ್ಯ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ೇಮಕಗೊಳಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಕೃಷಿ ಡಿಪ್ಲೊಮಾ ಕೇಂದ್ರವನ್ನು ಬೆಳ್ಳೇರಿಯಲ್ಲಿಯೇ ಉಳಿಸುವ ಪ್ರಯತ್ನ ಮಾಡುತ್ತಿರುವುದು ಸಮಾಧಾನ ತರಿಸಿದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಪಿ.ಸಿ. ಕಲಹಾಳ ಮಾತನಾಡಿ, ಭಾರತ ದೇಶ ಶಿಕ್ಷಣ, ಕೃಷಿ, ಆರೋಗ್ಯದ ಮೇಲೆಯೇ ನಿಂತಿದೆ. ಆದರೆ, ರೈತರಿಗೆ ಸಮಯಕ್ಕೆ ಸರಿಯಾಗಿ ಗೊಬ್ಬರ ಮತ್ತು ಕೀಟನಾಶಕಗಳು ದೊರೆಯದ ಕಾರಣ ರೈತನ ಆದಾಯ ಕುಸಿಯುತ್ತಿದೆ. ಜಾಗತೀಕರಣ, ಉದಾರೀಕರಣ ರೈತರ ಮೇಲೆ ಸಾಕಷ್ಟು ದುಷ್ಪರಿಣಾಮಗಳನ್ನು ಬೀರುತ್ತಿವೆ. ರೈತರು ಕೂಡ ರಾಸಾಯನಿಕ ಗೊಬ್ಬರ ಬಳಕೆ ನಿಲ್ಲಿಸಿ ಸಾವಯವ ಕೃಷಿಯತ್ತ ಮುಖ ಮಾಡಬೇಕಾಗಿದೆ ಎಂದು ತಿಳಿಸಿದರು.
ಪ್ರಗತಿಪರ ರೈತರಾದ ಬಸನಗೌಡ ಚಿಕ್ಕನಗೌಡ್ರ, ಬಸವನಗೌಡ ಹಿರೇಗೌಡ್ರ ಅವರು, ಸಿರಿಧಾನ್ಯಗಳ ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೊ. ಆರ್.ಬಿ. ಚಿನಿವಾಲರ, ಕಲಾವಿದ ವೀರಣ್ಣ ಕೌಜಗೇರಿ, ಮಹಾಂತೇಶ ಹಿರೇಮಠ, ಬಸವರಾಜ ಐನಾಪೂರ ಇತರರು ಉಪಸ್ಥಿತರಿದ್ದರು.