ದೇಸಿ ಅಕ್ಕಿ ಬಳಸಿ ಆರೋಗ್ಯಯುತವಾಗಿರಿ

New Rcie Mela new
Published on

ಹುಬ್ಬಳ್ಳಿ : ಸಿರಿಧಾನ್ಯ, ಔಷಧಿಯ ಗುಣವುಳ್ಳ ದೇಸಿ ಭತ್ತದ ಬೆಳೆಗೆ ರೈತರು ಆದ್ಯತೆ ನೀಡಬೇಕು. ಜನರು ಸಹ ಇವುಗಳನ್ನೇ ಬಳಸುವ ಮೂಲಕ ಆರೋಗ್ಯಯುತ ಜೀವನ ನಡೆಸಬೇಕು ಎಂದು ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಜೆ. ಕೃಷ್ಣ ಪ್ರಸಾದ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್​ನಲ್ಲಿ ಶನಿವಾರ ನಡೆದ ಎರಡು ದಿನಗಳ ದೇಸಿ ಅಕ್ಕಿ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಿ ಎದೆಹಾಲು ಹೆಚ್ಚಿಸುವ, ಪಾರ್ಶ್ವವಾಯು ತಡೆಗಟ್ಟುವ, ಮಧುಮೇಹ, ರಕ್ತದೊತ್ತಡ ನಿಯಂತ್ರಿಸುವ, ನರದೌರ್ಬಲ್ಯ ತಡೆಯುವ ಅನೇಕ ಔಷಧಿಗುಣವುಳ್ಳ ಶಕ್ತಿ ದೇಸಿ ಅಕ್ಕಿಗೆ ಇದೆ ಎಂದರು.

ಶಿಗ್ಗಾಂವಿ, ಕಲಘಟಗಿ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ರೈತರು ದೇಸಿ ಭತ್ತ ಬೆಳೆಯುತ್ತಾರೆ. ಆದರೆ, ದೇಸಿ ಅಕ್ಕಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಕೆಲಸ ಆಗುತ್ತಿಲ್ಲ. ಹೀಗಾಗಿ, ಸಹಜ ಸಮೃದ್ಧ ಸಂಸ್ಥೆ ವತಿಯಿಂದ ರೈತರಿಗೆ ಮಾರುಕಟ್ಟೆ ಒದಗಿಸುವ ಜತೆಗೆ ಜನರಿಗೆ ಗುಣಮಟ್ಟದ ಆಹಾರ ಧಾನ್ಯ ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ಧಾರವಾಡದಲ್ಲಿ ಪ್ರತಿ ಗುರುವಾರ ದೇಸಿ ಆಹಾರ ಧಾನ್ಯದ ಮಾರಾಟ ನಡೆಯುತ್ತಿದೆ. ಹುಬ್ಬಳ್ಳಿಯ ಅರ್ಬನ್ ಓಯಾಸಿಸ್ ಮಾಲ್​ನಲ್ಲಿಯೂ ಪ್ರತಿ ಭಾನುವಾರ ಈ ಮಾರುಕಟ್ಟೆ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಈ ಭಾಗದ ದೇಸಿ ಭತ್ತ ಬೆಳೆಯುವ ರೈತರಿಗೆ ಪ್ರಯೋಜನವಾಗಲೆಂಬ ಉದ್ದೇಶದಿಂದ ಉತ್ತರ ಕರ್ನಾಘಟಕದ ಮೊದಲ ಕೆಂಪಕ್ಕಿ ಮಿಲ್ ಅನ್ನು ಶಿಗ್ಗಾಂವಿ ಸಮೀಪದ ತಿಮ್ಮಾಪುತ ಬಳಿ 50 ಲಕ್ಷ ರೂ. ವೆಚ್ಚದಲ್ಲಿ ಶೀಘ್ರದಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.

ಜಾನುವಾರುಗಳು ತಿನ್ನುವ ಮೆಕ್ಕೆಜೋಳದ ಬೆಳೆಗೆ ಇಲ್ಲಿನ ರೈತರು ಆದ್ಯತೆ ನೀಡುತ್ತಿದ್ದಾರೆ. ಸಾವಿ, ತೊಗರಿ, ಉದ್ದುನಂತಹ ಸಿರಿಧಾನ್ಯದ ಬೆಳೆಗಳು ಕಣ್ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಉದ್ಘಾಟಿಸಿ ಮಾತನಾಡಿದ ಅರ್ಬನ್ ಓಯಾಸಿಸ್ ಮಾಲ್ ನಿರ್ದೇಶಕ ದೀಪಕ ಲುಲ್ಲಾ, ಸ್ವಲ್ಪ ಮಟ್ಟಿನ ಹಣ ಖರ್ಚಾದರೂ ಸರಿ ಜನರು ಸಾವಯವ ಆಹಾರ ಧಾನ್ಯಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ಮಾಲ್​ನ ಮತ್ತೊಬ್ಬ ನಿರ್ದೇಶಕ ಸುನಿಲ ಬಜಾಜ್ ಅತಿಥಿಯಾಗಿದ್ದರು. ಡೌನ್ ಟು ಅರ್ಥ್ ಸಂಸ್ಥೆಯ ವಿಭಾ, ರೈತ ಮಹಿಳೆಯರಾದ ಪ್ರೇಮಾ ಲಕ್ಕುಂಡಿ ಹಾಗೂ ಭಾಗ್ಯಶ್ರೀ ಮಾಣಿಕನವರ ಮಾತನಾಡಿದರು. ವೀರೇಶ ಹಿರೇಮಠ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net