ಆಯುರ್ವೇದ ಔಷಧ ಸೇವಿಸಿ ಆರೋಗ್ಯವಾಗಿರಿ

Stay healthy by taking Ayurvedic medicines
Published on

ಗಜೇಂದ್ರಗಡ: ಮೃಗಶಿರ ಮಳೆ ಸಂದರ್ಭದಲ್ಲಿ ತಂಪಾದ ವಾತಾವರಣ ನಿರ್ಮಾಣವಾಗುತ್ತದೆ. ಈ ಸಮಯದಲ್ಲಿ ಶೀತ ಜಾಸ್ತಿಯಿಗಿ ನೆಗಡಿ, ಕೆಮ್ಮು, ದಮ್ಮು ಉಲ್ಬಣಿಸುತ್ತದೆ. ಇಂತಹ ಕಾಯಿಲೆಗಳ ನಿವಾರಣೆಗಾಗಿ ಮೃಗಶಿರ ಮಳೆ ಪ್ರವೇಶಿಸುವ ಸಮಯದಲ್ಲಿ ಟೆಕ್ಕೇದ ದರ್ಗಾದ ಪೀಠಾಧಿಪತಿ 45 ವರ್ಷಗಳಿಂದ ಉಚಿತ ಆಯುರ್ವೇದ ಔಷಧ ವಿತರಿಸುತ್ತಿದ್ದಾರೆ ಎಂದು ಗಜೇಂದ್ರಗಡ-ಕುದರಿಮೋತಿ ಮೈಸೂರು ಸಂಸ್ಥಾನ ಮಠದ ಶ್ರೀ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಕಟ್ಟಿಬಸವೇಶ್ವರ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೃಗಶಿರ ಮಳೆ ನಕ್ಷತ್ರ ಪ್ರವೇಶದ ಹಿನ್ನೆಲೆಯಲ್ಲಿ ಅಸ್ತಮಾ ರೋಗಿಗಳಿಗೆ ಮಾತ್ರೆ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವರ್ಷದಲ್ಲಿ ಒಟ್ಟು 27 ಮಳೆಗಳಿದ್ದು, ಪ್ರತಿಯೊಂದು ಮಳೆಯೂ ತನ್ನದೆಯಾದ ವೈಶಿಷ್ಟ್ಯ ಹೊಂದಿವೆ. ಒಂದೊಂದು ಮಳೆ ಪ್ರವೇಶದ ಸಂದರ್ಭದಲ್ಲಿ ಒಂದೊಂದು ವಿಶೇಷತೆಯಿರುತ್ತದೆ. ಅಸ್ತಮಾ ರೋಗಿಗಳು ಆಯುರ್ವೇದ ಔಷಧ ಸೇವಿಸಿ ಆರೋಗ್ಯವಂತರಾಗಬೇಕು ಎಂದರು.

ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಟೆಕ್ಕೇದ ದರ್ಗಾದ ಪೀಠಾಧಿಪತಿಗಳು ನಾಲ್ಕೈದು ದಶಕಗಳಿಂದ ಅಸ್ತಮಾ ರೋಗಿಗಳಿಗೆ ಉಚಿತ ಔಷಧ ವಿತರಿಸುತ್ತಿರುವುದು ಸಮಾಜದ ಮೇಲಿನ ಕಾಳಜಿ ತೋರಿಸುತ್ತದೆ. ದರ್ಗಾದ ಅಭಿವೃದ್ಧಿಗೆ ಅನುದಾನ ನೀಡುತ್ತೇನೆ ಎಂದರು.

ಟೆಕ್ಕೇದ ದರ್ಗಾದ ಪೀಠಾಧಿಪತಿ ಹಜರತ್ ನಿಜಾಮುದ್ದೀನ್ ಶಾ ಮಕಾನದಾರ ಮಾತನಾಡಿ, ಧೂಮಪಾನ, ಮದ್ಯಪಾನದಿಂದ ಅಸ್ತಮಾದಂತ ರೋಗಗಳು ಬರುತ್ತವೆ. ಹೀಗಾಗಿ, ಯುವಕರು ದುಶ್ಚಟಗಳಿಂದ ದೂರವಿರಬೇಕು. ಮಾತ್ರೆ ಪಡೆದವರು ದುಶ್ಚಟಗಳನ್ನು ತ್ಯಜಿಸುವ ಜತೆಗೆ ಹಲಸಿನ ಹಣ್ಣು ಸೇವನೆಯಿಂದ ದೂರವಿರಬೇಕು ಎಂದರು.

ಕಟ್ಟಿಬಸವೇಶ್ವರ ರಂಗಮಂದಿರದಲ್ಲಿ ಮಧ್ಯಾಹ್ನ 1.23ಕ್ಕೆ ಮೃಗಶಿರ ಮಳೆ ಪ್ರವೇಶಿಸುವ ಸಂದರ್ಭದಲ್ಲಿ ಬೇರೆ ಬೇರೆ ಊರುಗಳಿಂದ ಬಂದಿದ್ದ ಸಾವಿರಾರು ಜನರಿಗೆ ಜನರಿಗೆ ಮಾತ್ರೆ ವಿತರಿಸಲಾಯಿತು.

ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಸಿದ್ದಣ್ಣ ಬಂಡಿ, ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ಮುರ್ತುಜಾ ಡಾಲಾಯತ, ರಾಜು ಸಾಂಗ್ಲೀಕರ, ಹಾಗೂ ಚಂಬಣ್ಣ ಚವಡಿ, ಬಸವರಾಜ ಹೂಗಾರ, ಪ್ರಭು ಚವಡಿ, ಬಸವರಾಜ ಕೊಟಗಿ, ಎಚ್.ಎಸ್. ಸೋಂಪುರ, ಎ.ಡಿ. ಕೋಲಕಾರ, ಹಸನಸಾಬ ತಟಗಾರ, ರಫಿಕ ತೋರಗಲ್ಲ, ಎಂ.ಎಸ್. ಮಕನದಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net