

ಎನ್.ಆರ್.ಪುರ: ತಂಬಾಕನ್ನು ತ್ಯಜಿಸಿ ಆರೋಗ್ಯ ರಕ್ಷಿಸಿಕೊಳ್ಳಿ ಎಂದು ಸರ್ಕಾರಿ ಆಸ್ಪತ್ರೆ ದಂತ ವೈದ್ಯ ಶ್ರೀನಿವಾಸ್ ಹೇಳಿದರು.
ಬಿ.ಎಚ್.ಕೈಮರ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯಲ್ಲಿ ಮಾತನಾಡಿ, ತಂಬಾಕು ಉತ್ಪನ್ನಗಳನ್ನು ಬಳಸುವುದರಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಕಾಯಿಲೆ, ಕ್ಷಯ, ನಪುಂಸಕತ್ವ, ನಿದ್ರಾಹೀನತೆ ಮತ್ತು ಮಾನಸಿಕ ರೋಗಗಳು ಉಲ್ಬಣವಾಗುತ್ತವೆ ಎಂದರು. ಬೀಡಿ ಮತ್ತು ಸಿಗರೇಟ್‌ನಲ್ಲಿ 4000ಕ್ಕೂ ಹೆಚ್ಚು ರಾಸಾಯನಿಕಗಳು ಇದ್ದು, ಕ್ಯಾನ್ಸರ್ ಉತ್ಪತ್ತಿ ಮಾಡುತ್ತವೆ. ಹದಿಹರೆಯದ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳ ದುಷ್ಪರಿಣಾಮ ತಿಳಿದುಕೊಂಡು ಇತರರಲ್ಲೂ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ರೆಹಮತ್‌ಉಲ್ಲಾ ಖಾನ್, ಡಾ. ನಿಶಾಲ್ ವಸಂತಕುಮಾರ್, ಪಿ.ಪಿ.ಬೇಬಿ, ನಾಗಲತಾ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.