

ಸಿದ್ದಾಪುರ: ಜಗತ್ತಿಗೆ ಮಾದರಿಯಾಗಿರುವ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಉಳಿಸಿಕೊಳ್ಳಬೇಕಾದರೆ ಪ್ರತಿಯೊಬ್ಬರ ಮನಸ್ಥಿತಿ ಸರಿಯಾಗಿರಬೇಕು. ವಿದೇಶಿಯರ ಅರ್ಥಹೀನ ಸಂಸ್ಕೃತಿಯಿಂದ ದೂರವಿದ್ದು ನಮ್ಮ ಜೀವನಶೈಲಿಯನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ಶಿರಳಗಿ ಶ್ರೀ ಚೈತನ್ಯ ರಾಜಾರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾದ ಗಜಾನನನೋತ್ಸವ ಸಮಿತಿಯಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಾವಸು ಸಂವತ್ಸರದ ಯುಗಾದಿ ಉತ್ಸವದ ಧಾರ್ವಿುಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಮಕ್ಕಳಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಹಾಗೂ ಶಂಕರಾಚಾರ್ಯರ ತತ್ವಾದರ್ಶಗಳನ್ನು ತಿಳಿಸಿಕೊಡಬೇಕು. ಭಗವಂತನ ನಾಮಸ್ಮರಣೆ ನಿರಂತರವಾಗಿ ಮಾಡಬೇಕು ಎಂದರು.
ಇನ್ಯೂರೆನ್ಸ್ ಸರ್ವೆಯರ್ ಹಾಗೂ ಆರ್ಎಸ್ಎಸ್ ವಿಭಾಗ ಸಂಚಾಲಕ ಶ್ರೀಧರ ಹಿರೇಹದ್ದ ಮಾತನಾಡಿ, ಭಾರತ ಮಾತೆಯ ಮಕ್ಕಳಾದ ನಾವು ಎಲ್ಲರೂ ಒಂದೇ ಎನ್ನುವ ಭಾವನೆ ಎಲ್ಲರಲ್ಲಿಯೂ ಇರಬೇಕು. ಎಲ್ಲರೂ ಸೇರಿ ಬದುಕಬೇಕು. ಇಂದಿನ ಶಿಕ್ಷಣ ಪದ್ದತಿಯಲ್ಲಿ ಜೀವನ ಶಿಕ್ಷಣ ಮರೆಯಾಗಿದೆ. ಯಾವ ಯಾವುದೋ ಇತಿಹಾಸ ಇಂದು ಪಾಠವಾಗುತ್ತಿದೆ. ಮೊದಲಿದ್ದ ಕಥಾರೂಪ ಇತಿಹಾಸ ಕಾಣದಂತಾಗಿದೆ. ಇದರಿಂದ ನಮ್ಮ ನೆಲದ ಇತಿಹಾಸ ತಿಳಿಯದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಿವೃತ್ತ ಸೈನಿಕ ವಿನಾಯಕ ದೇವಾಸ ಮಾತನಾಡಿದರು. ಯುಗಾದಿ ಉತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಂದ್ರಶೇಖರ ಹೆಗಡೆ ಉಯ್ಯಾಲೆಮನೆ ಹಾಗೂ ವಿಕ್ರಮ ಹೆಗಡೆ ಹೊಸ್ಕೊಪ್ಪ ವೇದಘೊಷ ಮಾಡಿದರು. ಶಿಕ್ಷಕಿ ದಾಕ್ಷಾಯಣಿ ವಂದಿಸಿದರು. ರಮೇಶ ಹಾರ್ಸಿಮನೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಇದಕ್ಕೂ ಮುನ್ನ ಯುಗಾದಿ ಉತ್ಸವದ ಅಂಗವಾಗಿ ಹಾರ್ಸಿಕಟ್ಟಾ ಭೂತೇಶ್ವರ ಸನ್ನಿಧಿಯಿಂದ ಮುಠ್ಠಳ್ಳಿಯ ಶ್ರೀ ಜಗನ್ನಾಥ ದುರ್ಗಾವಿನಾಯಕ ದೇವಾಲಯದಲ್ಲಿ ದೇವರ ದರ್ಶನ ಪಡೆದ ದವರೆಗೆ 60ಕ್ಕೂ ಹೆಚ್ಚು ಬೈಕ್ ಸವಾರರು ಮತ್ತೆ ಹಾರ್ಸಿಕಟ್ಟಾವರೆಗೆ ಬೈಕ್ ರ‍್ಯಾಲಿ ನಡೆಸಿದರು.