ದುಶ್ಚಟಗಳಿಂದ ದೂರವಿರಿ

21 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ ಇಂದಿನ ಸಮಾಜ ಸದೃಢ ಸಮಾಜವಾಗಿ ಮಾರ್ಪಾಡಾಗಲು ಆರೋಗ್ಯವಂತ ಯುವಕರ ಅವಶ್ಯಕತೆ ಇದೆ ಎಂದು ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು. ನಗರದ ಎಂ.ಎನ್. ಪಾಟೀಲ ಎಜುಕೇಶನ್ ಪ್ರತಿಷ್ಠಾನದ ಸ್ವಾಮಿ ವಿವೇಕಾನಂದ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಆಶ್ರಯದಲ್ಲಿ ಇಲ್ಲಿನ ಆಲೂರು ವೆಂಕಟರಾವ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ವಿವೇಕ ಉತ್ಸವ ಉದ್ಘಾಟಿಸಿ ಮಾತನಾಡಿದರು. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಓದಿನ ಕಡೆಗೆ ಗಮನಹರಿಸಿ ತಂದೆ-ತಾಯಿಗಳಿಗೆ ಹಾಗೂ ಕಲಿತ ವಿದ್ಯಾಸಂಸ್ಥೆಗೆ ಉತ್ತಮ ಕೊಡುಗೆ ನೀಡಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಪಾಲಕರು ಅಂಕಗಳಿಕೆಗಾಗಿ ಮಕ್ಕಳಿಗೆ ಒತ್ತಾಯಿಸದೆ ಸಂಸ್ಕಾರ ನೀಡಿ ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸಬೇಕು. ಮುಂದಿನ ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರು ವಿವೇಕಾನಂದರ ಆದರ್ಶ ಮೈಗೂಡಿಸಿಕೊಂಡು ವೀರ ಸನ್ಯಾಸಿಯಂತೆ ದೇಶದ ಘನತೆಯನ್ನು ಉತ್ತುಂಗಕ್ಕೇರಿಸಬೇಕು ಎಂದರು. ಶಿವಲೀಲಾ ಕುಲಕರ್ಣಿ ಮಾತನಾಡಿ, ಹೆಣ್ಣು ಪುರುಷರಷ್ಟೇ ಶಕ್ತಳು. ವಿದ್ಯಾರ್ಥಿನಿಯರು ಅಲಂಕಾರಿಕಾ ಬದುಕಿಗೆ ಆಸೆ ಪಡದೆ ಜವಾಬ್ದಾರಿ ಅರಿತು ಸಾಧಕರಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಎಂ.ಎನ್. ಪಾಟೀಲ ಎಜುಕೇಶನ್ ಪ್ರತಿಷ್ಠಾನ ಅಧ್ಯಕ್ಷ ಎಂ.ಎನ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿಯ ಭಾವನೆ ಅರಿತು ಉತ್ತಮವಾಗಿ ಓದಿ ಯಶಸ್ಸು ಗಳಿಸಬೇಕು ಎಂದರು. ನೇತ್ರಾವತಿ ಗಾಳಿಮಠ, ಕಾರ್ತಿಕ ಪಾಟೀಲ, ವಿದ್ಯಾರ್ಥಿಗಳು, ಶಿಕ್ಷಕರು, ಇತರರು ಇದ್ದರು. ಬಸವರಾಜ ಹನಗಂಡಿ ಸ್ವಾಗತಿಸಿದರು. ಪ್ರಾಚಾರ್ಯ ಶಿವಶಂಕರರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಎಸ್. ಕುಂಟೆ ಸಂಸ್ಥೆಯ ವರದಿ ವಾಚಿಸಿದರು. ವರ್ಷ ಕುಲಕರ್ಣಿ ನಿರೂಪಿಸಿದರು. ಡಾ.ಬಿ. ಪಿ. ಕಾಮತ ವಂದಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net