

ವಿಜಯವಾಣಿ ಸುದ್ದಿಜಾಲ ಧಾರವಾಡ
ಮದ್ಯ ಮತ್ತು ಮಾದಕ ವಸ್ತುಗಳು ಸಾಮಾಜಿಕ ಅಸ್ಥಿರತೆ ಉಂಟು ಮಾಡುತ್ತಿವೆ. ಇವು ಇಡೀ ಸಮಾಜಕ್ಕೆ ಕಂಟಕವಾಗಿವೆ. ಇಂತಹ ದುಶ್ಚಟಗಳಿಂದ ಯುವ ಸಮೂಹ ಸಮೂಹ ದೂರವಿದ್ದು, ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ಗಾಂಧಿ ಜಯಂತಿ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ನಗರದ ಜೆಎಸ್‌ಎಸ್ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಗಾಂಧೀಜಿ ಸ್ಮತಿ ಹಾಗೂ ನವಜೀವನ ಸಮಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ನಾಗರಿಕರನ್ನು ದುಶ್ಚಟದಿಂದ ದೂರವಾಗಿಸಲು ನೂರಾರು ಶಿಬಿರಗಳನ್ನು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸುತ್ತಿದೆ. ರಾಜ್ಯದಲ್ಲಿ ಈವರೆಗೆ 1750 ಮದ್ಯವರ್ಜನ ಶಿಬಿರ ಆಯೋಜಿಸಿದ್ದು, ಈವರೆಗೆ 1.50 ಲಕ್ಷಕ್ಕೂ ಅಧಿಕ ಜನರು ವ್ಯಸನ ಮುಕ್ತರಾಗಿದ್ದಾರೆ. ಇದರಿಂದ ಲಕ್ಷಾಂತರ ಕುಟುಂಬಗಳು ನೆಮ್ಮದಿ ಜೀವನ ನಡೆಸುತ್ತಿವೆ ಎಂದರು.
ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಮಾದಕ ವಸ್ತುಗಳ ಸೇವನೆಯಿಂದ ಯುವಕರು ಆಯುಷ್ಯ, ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ನೂರು ವರ್ಷ ಬಾಳಬೇಕಾದವರು ವ್ಯಸನದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಆರ್ಥಿಕ, ಸಾಮಾಜಿಕ, ಕೌಟುಂಬಿಕ ಮತ್ತು ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಮದ್ಯ ವ್ಯಸನದಿಂದ ಮುಕ್ತರಾಗಿ ಉತ್ತಮ ಆರೋಗ್ಯಯುತ ಜೀವನ ನಡೆಸಬೇಕು ಎಂದರು.
ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ, ಸವಿತಾ ಅಮರಶೆಟ್ಟಿ, ಮಲ್ಲಿಕಾರ್ಜುನ ಬಾಳಿಕಾಯಿ, ಮಹಾವೀರ ಉಪಾಧ್ಯೆ, ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ವಸಂತ ಅರ್ಕಾಚಾರ, ಪ್ರಭಾಕರ ನಾಯಕ, ಸಿ.ಪಿ. ಮಾಯಾಚಾರಿ, ಕರಿಯಪ್ಪ ಅಮ್ಮಿನಬಾವಿ, ದೇವೇಂದ್ರಪ್ಪ ಕಾಗೇನವರ, ದ್ಯಾಮಣ್ಣ ಹುಡೇದ, ಮೃತ್ಯುಂಜಯ ಸಾಲಿಮಠ, ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ, ಯೋಜನಾಧಿಕಾರಿ ಮಯೂರ ಅಶೋಕ, ಇತರರು ಇದ್ದರು.
ಸಮಾರಂಭಕ್ಕೂ ಪೂರ್ವ ಟೋಲ್‌ನಾಕಾದಿಂದ ಸನ್ನಿಧಿ ಕಲಾಕ್ಷೇತ್ರವರೆಗೆ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಶಿವಲೀಲಾ ಕುಲಕರ್ಣಿ ಚಾಲನೆ ನೀಡಿದರು.