

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಬಿವಿಬಿ ಕಾಲೇಜ್ ಆವರಣದಲ್ಲಿ ಮಾದಕ ವಸ್ತು ವಿರುದ್ಧ ಜಾಗೃತಿ ಅಭಿಯಾನದ ವಾಕಥಾನ್‌ಗೆ ಚಿತ್ರನಟ ಉಪೇಂದ್ರ ಅವರು ಬುಧವಾರ ಚಾಲನೆ ನೀಡಿದರು.
ಬಿವಿಬಿ ಕಾಲೇಜ್‌ನಿಂದ ಶಿರೂರ ಪಾರ್ಕ್ ರಸ್ತೆ ಮೂಲಕ ತೋಳನಕೆರೆ ಮುಂಭಾಗದಲ್ಲಿ ಹು-ಧಾ ಎಲ್ಲ ಪದವಿಪೂರ್ವ ಮತ್ತು ಪದವಿ ಕಾಲೇಜ್‌ಗಳ ಸಹಭಾಗಿತ್ವದಲ್ಲಿ ಅಪರಾಧ ತಡೆ, ಸಂಚಾರ ನಿಯಮ ಪಾಲನೆ ಮತ್ತು ಮಾದಕ ವಸ್ತು ಬಳಕೆ ವಿರುದ್ಧ ಜಾಗೃತಿ ಕಾರ್ಯಕ್ರಮ ಜರುಗಿತು.
ಡೈಲಾಗ್ ಮತ್ತು ನೃತ್ಯದ ಮೂಲಕ ವಿದ್ಯಾರ್ಥಿಗಳನ್ನು ಸೆಳೆದು ಮಾತನಾಡಿದ ಉಪೇಂದ್ರ, ನಿನ್ನೊಳಗೊಬ್ಬ ಗೆಳೆಯ, ಆತ್ಮ ಮತ್ತು ಪರಮಾತ್ಮ ಇದ್ದಾನೆ. ಆತನೊಂದಿಗೆ ಮಾತನಾಡುವುದು ಕಲಿಯಬೇಕು. ಬೇರೆ ಯಾರ ಮಾತನ್ನೂ ಕೇಳಬಾರದು ಎಂದರು.
ಇಷ್ಟೊಂದು ದೇವರುಗಳಿಗೆ ಹೇಳುವುದು ಏನಿದೆ. ವಿದ್ಯಾರ್ಥಿಗಳೇ ದೇವರು. ನಿಮ್ಮೊಳಗೊಬ್ಬ ನಾಯಕ ಇದ್ದಾನೆ. ಎಲ್ಲದಕ್ಕೂ ನಿಮ್ಮಲ್ಲೇ ಉತ್ತರ ಇರುತ್ತದೆ. ನಾನು ಐ ಆ್ಯಮ್ ಗಾಡ್, ಗಾಡ್ ಇಸ್ ಗ್ರೇಟ್ ಎಂದಿದ್ದೆ. ಅದೆಲ್ಲವನ್ನೂ ನೀವು ಹೇಳಿಕೊಳ್ಳಬೇಕು. ಮಾದಕ ವ್ಯಸದಿಂದ ನೀವೇ ದೂರ ಇರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ ಹಾಗೂ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ, ಕೆಎಲ್‌ಇ ತಾಂತ್ರಿಕ ವಿವಿಯ ಸಹ ಕುಲಾಧಿಪತಿ ಡಾ. ಅಶೋಕ ಶೆಟ್ಟರ್, ನಿರ್ಮಾಪಕ ಕೆ.ಪಿ. ಶ್ರೀಕಾಂತ, ಕೆಎಂಆರ್‌ಸಿ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ, ಇತರರು ಇದ್ದರು.
ನೀವು ಮಾಡಿದರೆ ಪ್ರಜಾಕೀಯ: ನಾನು ಮಾಡಿದರೆ ರಾಜಕೀಯ ನೀವು ಮಾಡಿದರೆ ಪ್ರಜಾಕೀಯ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉಪೇಂದ್ರ ಹೀಗೆ ಉತ್ತರಿಸಿದರು. ಪ್ರಜಾಕೀಯ ಅಂತ ಬಂದಿರುವುದು ಪ್ರಜೆಗಳಿಗಾಗಿ. ನಾವು ರಾಜಕೀಯ ಮಾಡಬಾರದು. ಪ್ರಜಾಕೀಯ ಮಾಡಬೇಕು. ನೀವು ನಿಮಗಾಗಿಯೇ ಇರುವುದು. ಅಧಿಕಾರ ಎಷ್ಟೊಂದು ಕಷ್ಟ ಎನ್ನುವುದು ಇವರನ್ನು ನೋಡಿ ಎಂದು ಡಿಸಿ ಮತ್ತು ಪೊಲೀಸ್ ಆಯುಕ್ತರತ್ತ ಬೆಟ್ಟು ಮಾಡಿ ತೋರಿಸಿದರು.
ಹಾಡು, ಡೈಲಾಗ್‌ಗೆ ಫಿದಾ: ರಕ್ತ ಕಣ್ಣೀರು, ಯು ಐ ಸೇರಿದಂತೆ ಉಪೇಂದ್ರ ಅವರು ಹಲವು ಡೈಲಾಗ್ ಹೊಡೆದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ತಮ್ಮದೇ ಚಲನಚಿತ್ರಗಳ ಹಾಡಿಗೆ ಹೆಜ್ಜೆ ಹಾಕಿ ವಿದ್ಯಾರ್ಥಿಗಳೂ ಸ್ಟೆಪ್ ಹಾಕುವಂತೆ ಮಾಡಿದರು.