ಮಾದಕ ವ್ಯಸನದಿಂದ ದೂರವಿರಿ

Stay away from drug addiction.
ವಿಜಯಪುರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಬಿವಿಪಿ ವತಿಯಿಂದ ನಶೆ ಮುಕ್ತ ಕ್ಯಾಂಪಸ್​ ನಮ್ಮ ಹೊಣೆ' ಕಾರ್ಯಕ್ರಮದಲ್ಲಿ ಎಬಿವಿಪಿ ಜಿಲ್ಲಾ ಪ್ರಮುಖ ಎಂ.ಎಸ್​. ಬಿರಾದಾರ, ಸಿ.ಎಸ್​. ಪೂಜಾರಿ, ಸಂಚಾಲಕ ಸಂದೀಪ ಅರಳಗುಂಡಿ, ದಾನಮ್ಮ ಹೊಸಮನಿ ಇತರರಿದ್ದರು.
Published on

ವಿಜಯಪುರ: ಇತ್ತೀಚಿನ ದಿನಮಾನದಲ್ಲಿ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದು, ಇದು ರಾಷ್ಟ್ರದ ಭದ್ರತೆಗೆ ಸವಾಲಾಗಿದೆಯಲ್ಲದೇ, ಭವಿಷ್ಯದ ಪೀಳಿಗೆಯನ್ನು ವ್ಯವಸ್ಥಿತವಾಗಿ ನಾಶ ಮಾಡುವ ಸಂಚಾಗಿದೆ ಎಂದು ಎಬಿವಿಪಿ ಜಿಲ್ಲಾ ಪ್ರಮುಖ ಎಂ.ಎಸ್​. ಬಿರಾದಾರ ಹೇಳಿದರು.

"ಸಮಾಜ ನಿರ್ಮಾಣಕ್ಕಾಗಿ ನಶೆ ಮುಕ್ತ ಕ್ಯಾಂಪಸ್​ ನಮ್ಮ ಹೊಣೆ' ಎಂಬ ಸಂಕಲ್ಪದೊಂದಿಗೆ ವಿಜಯಪುರ ಮಹಾನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಶಾಮುಕ್ತ ದಿನಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸತ್ತಿನ ಸ್ಥಾಯಿ ಸಮಿತಿ ಇತ್ತೀಚೆಗೆ ನೀಡಿರುವ ವರದಿ ಪ್ರಕಾರ ಮಾದಕ ವಸ್ತುಗಳ ಪೂರೈಕೆ ಜಾಲದ ಟಾರ್ಗೆಟ್​ ಶಾಲೆ, ಕಾಲೇಜು ವಿದ್ಯಾರ್ಥಿಗಳು. ಅದರಲ್ಲೂ ಅಪ್ರಾಪ್ತ ವಯಸ್ಸಿನ 10 ರಿಂದ 17 ವರ್ಷ ವಯೋಮಾನದವರಾಗಿದ್ದು, ಪಂಜಾಬ್​, ಹರ್ಯಾಣ, ಆಸ್ಸಾಂ, ಆಂಧ್ರಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ದಿಲ್ಲಿ, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ಅಪಾಯಕಾರಿ ಪ್ರಮಾಣದಲ್ಲಿ ಮಾದಕ ವ್ಯಸನಕ್ಕೆ ತುತ್ತಾಗುತ್ತಿದೆ ಎಂದರು.

ಅತಿಥಿ ಸಿ.ಎಸ್​. ಪೂಜಾರಿ ಮಾತನಾಡಿ, ಭಾರತದ ಯುವ ಪೀಳಿಗೆಯನ್ನು ಮಾದಕ ವಸ್ತುಗಳಿಗೆ ದಾಸರಾಗುವಂತೆ ಮಾಡಿ, ದೇಶವನ್ನೇ ನಿಶ್ಯಕ್ತಗೊಳಿಸುವ ಅಂತಾರಾಷ್ಟ್ರೀಯ ಸಂಚು ನಡೆದಿರುವ ಶಂಕೆ ವ್ಯಕ್ತಪಡಿಸಿ, ಮನರಂಜನೆಯ ಮಾಧ್ಯಮಗಳು ನಶೆಯ ಪದಾರ್ಥಗಳನ್ನು ಪ್ರಚೋಧಿಸುವುದರ ಜೊತೆಗೆ ಅದನ್ನೂ ವೈಭವೀಕರಿಸುತ್ತಿರುವುದು ವಿಷಾದನೀಯ ಎಂದರು. ಒಂದು ದೇಶವನ್ನು ವಿಧ್ವಂಸಗೊಳಿಸಲು ಬಾಂಬ್​ ಹಾಕುವುದಕ್ಕಿಂತ ಯುವಜನರನ್ನು ನಶೆಯ ದಾಸರನ್ನಾಗಿಸಿದರೆ ಸಾಕು ದೇಶ ತಾನೇ ನಾಶವಾಗುತ್ತದೆ ಎಂದರು.

ಸಂಚಾಲಕ ಸಂದೀಪ ಅರಳಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ಕಳೆದ 75 ವರ್ಷಗಳಿಂದ ಪ್ರತಿ ಕಾಲೇಜ್​ ಕ್ಯಾಂಪಸ್​ನಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದು, ಆ ಮೂಲಕ ಯುವ ಪೀಳಿಗೆಯನ್ನು ಎಚ್ಚರಿಸುವ ಕೆಲಸದಲ್ಲಿ ತೊಡಗಿಕೊಂಡಿದೆ.

ಎಬಿವಿಪಿ ಕಾರ್ಯಕರ್ತರಾದ ಬಾಲಾಜಿ ಬಿರಾದಾರ, ದಾನಮ್ಮ ಹೊಸಮನಿ, ಶಿಲ್ಪಾ ಪೂಜಾರಿ, ತಾರಾ ಕಡಕೋಳ, ನೂರಾರು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net