

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಪಾಯಕಾರಿ ಎಚ್ಐವಿ ಕುರಿತು ಯುವ ಜನಾಂಗ ಎಚ್ಚರದಿಂದ ಇರಬೇಕು. ಸ್ವೇಚ್ಚಾಚಾರದ ನಡುವಳಿಕೆಯಿಂದ ಮಾರಕ ರೋಗ ತಗಲುವ ಅಪಾಯವಿದೆ. ಏಡ್ಸದಂತಹ ರೋಗಗಳಿಂದ ದೂರವಿರಲು ಅರಿವು, ಜಾಗೃತೆ ಮತ್ತು ಸುರಕ್ಷತಾ ಕ್ರಮ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ವಿಶ್ವ ಏಡ್ಸ್ ದಿನ ನಿಮಿತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರೇತರ ಸಂಘ, ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳ ಆಶ್ರಯದಲ್ಲಿ ಆಯೋಜಿಸಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಚ್ಐವಿ ಮತ್ತು ಏಡ್ಸ್ ಕಾಯಿಲೆ 35 ವರ್ಷಗಳಿಂದ ಕಾಡುತ್ತಿದ್ದು, ಇದರ ನಿಯಂತ್ರಣಕ್ಕೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ನಿರಂತರ ಕಾರ್ಯಕ್ರಮಗಳಿಂದ ಎಚ್ಐವಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ. ಎಚ್ಐವಿ ವೈರಸ್ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಹಾಗೂ ಅಪಾಯದ ಸಮುದಾಯಗಳಿಂದ ಸಾಮಾನ್ಯ ಜನರೆಡೆಗೆ ವಿಸ್ತರಿಸಿದೆ. ಹೀಗಾಗಿ ರೋಗ ನಿಯಂತ್ರಣ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಿಂದ ತಾಲೂಕು ಹಾಗೂ ಗ್ರಾಮೀಣ ಮಟ್ಟದವರೆಗೆ ವಿಸ್ತರಿಸಲಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಮಾತನಾಡಿದರು. ಆರ್ಸಿಎಚ್ಒ ಡಾ. ಸುಜಾತಾ ಹಸವಿಮಠ, ಡಿಟಿಒ ಡಾ. ರವೀಂದ್ರ ಬೋವರೆ, ತಾಲೂಕು ವೈದ್ಯಾಧಿಕಾರಿ ಡಾ. ಕೆ.ಎನ್. ತನುಜಾ, ಡಾ. ಉಮೇಶ ಹಳ್ಳಿಗೇರಿ, ವೈದ್ಯರು, ಇತರರು ಇದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಸ್ವಾಗತಿಸಿದರು.
ನಂತರ ಜಾಥಾವು ರಾಣಾ ಪ್ರತಾಪಸಿಂಹ ವೃತ್ತ, ಆಲೂರು ವೆಂಕಟರಾವ್ ವೃತ್ತ ಮಾರ್ಗವಾಗಿ ಜಿಲ್ಲಾ ನ್ಯಾಯಾಲಯ ಮೂಲಕ ಮರಳಿ ಡಿಎಚ್ಒ ಕಚೇರಿ ತಲುಪಿತು.