

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಂಕಗಳ ಬೆನ್ನು ಹತ್ತದೆ ಭವಿಷ್ಯಕ್ಕೆ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕನಸು ಕಂಡು ಸಾಧನೆ ಮಾಡಬೇಕು. ದುಶ್ಚಟಗಳಿಂದ ದೂರವಿರಿ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನದ ಲಾಭ ಪಡೆದು ಶಿಸ್ತು ಬದ್ಧ ಜೀವನ ನಡೆಸಿ ಜ್ಞಾನವಂತರಾಗಬೇಕು ಎಂದು ಶಿಕ್ಷಣ ತಜ್ಞ ಡಾ. ಎಸ್. ಎಂ. ಶಿವಪ್ರಸಾದ ಹೇಳಿದರು.
ನಗರದ ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ರೈ.ರೆ. ಡಾ. ಮಾರ್ಟಿನ ಬೋರ್ಗಾಯಿ ಮಾತನಾಡಿ, ಮಕ್ಕಳು ನಿರಂತರ ಕಠಿಣ ಪರಿಶ್ರಮದಿಂದ ಗುರುಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಾ ವಿದ್ಯಾವಂತರಾಗಿ, ಪಾಲಕರು ತಮ್ಮ ಬಗ್ಗೆ ಕಂಡ ಕನಸನ್ನು ನನಸಾಗಿಸಬೇಕು ಎಂದರು.
2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ, 2024-25ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿಗಳು ಹಾಗೂ ವಿಜ್ಞಾನ, ಕಲೆ, ಆಟೋಟ, ಇತರ ವಿಷಯಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು.
ಧರ್ಮದರ್ಶಿ ವಿಜಯಕುಮಾರ ದಂಡಿನ, ಎಸ್. ಡಿ. ಬೇಲಿ, ಕಾರ್ಯದರ್ಶಿ ವಿಲ್ಸನ ಮೈಲಿ, ಸಭಾ ಪಾಲಕ ರೆ. ಸ್ಯಾಮುವೇಲ್ ಕ್ಯಾಲ್ವಿನ್, ಪ್ರೇಮಾ ಬೋರ್ಗಾಯಿ, ದಿವಾಕರ ಪುನೀತ, ಸ್ಟೀನ ಜಯಚಂದ್ರ, ಅಲ್ಬರ್ಟ ಕಬಾಡಗಿ, ಪ್ರಕಾಶ ಹುಗ್ಗಿ, ಶಾಲಾ ಮುಖ್ಯಾಧ್ಯಾಪಕ ಜಾಯ್ ಪ್ರಕಾಶ ಭಾಸ್ಕರ, ರೀಟಾ ಅಕ್ಕಿಹಾಳ, ಅನಿತಾ ಏಕಬೋಟೆ, ರೋಸಲಿನ್ ಹಳ್ಳಿ, ಸ್ಟೆಲ್ಲಾ ಅರಳಿಕಟ್ಟಿ, ಸರಿತಾ ಮಲ್ಲಾರ, ವಸಂತ ಕೋಲ್ಹಾರ್, ಇತರರು ಇದ್ದರು.