

ಕವಿತಾಳ: ಪ್ರತಿಯೊಬ್ಬರೂ ಒತ್ತಡ ರಹಿತ ಜೀವನಕ್ಕೆ ಒತ್ತು ಕೊಡಬೇಕು ಎಂದು ಮನೋರೋಗ ತಜ್ಞ ಡಾ.ಮನೋಹರ ಪತ್ತಾರ್ ಹೇಳಿದರು.
ಸಮೀಪದ ತೋರಣದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದಿಂದ ಹಮ್ಮಿಕೊಂಡಿದ್ದ ಮನೋ ಚೈತನ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧೂಮಪಾನ ಮತ್ತು ಮದ್ಯಪಾನಕ್ಕೆ ದಾಸರಾಗದೆ ದೂರವಿರಬೇಕು. ಸಮಯಕ್ಕೆ ಸರಿಯಾಗಿ ವಿಶ್ರಾಂತಿ ಪಡೆಯಬೇಕು. ಸ್ನೇಹಿತರು, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು. ಡಾ.ಪರಶುರಾಮ ಸಿಂಗ್ ಮಾತನಾಡಿ, ಮನೋ ಚೈತನ್ಯ ಕಾರ್ಯಕ್ರಮದಿಂದ ಗ್ರಾಮೀಣ ಪ್ರದೇಶದ ಮಾನಸಿಕ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ, ಆಪ್ತ ಸಮಾಲೋಚಕರಾದ ಅರುಣ ಕುಲಕರ್ಣಿ, ದೀಪಾ, ಮಂಜುಳಾ, ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಶ್ರೀನಿವಾಸ್ ಇತರರಿದ್ದರು.