

ಹುಬ್ಬಳ್ಳಿ : ಬಾಗಲಕೋಟೆಯಲ್ಲಿ ಇತ್ತೀಚೆಗೆ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪುತ್ಥಳಿ ತೆರವುಗೊಳಿಸಿದ್ದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಬುಧವಾರದಂದು ಮರಾಠಾ ಸಮಾಜದ ಮರಾಠಾ ಶ್ರೀ ಭಾರತಿ ಮಠ ಟ್ರಸ್ಟ್ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಯಿತು.
ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಉದ್ಯಾನವನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ಸರ್ ಸಿದ್ದಪ್ಪ ಕಂಬಳಿ ರಸ್ತೆ ಮುಖಾಂತರ ತಹಸೀಲ್ದಾರ ಕಚೇರಿವರೆಗೆ ನಡೆಯಿತು. ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗೆ ಮನವಿ ರವಾನಿಸಲಾಯಿತು.
ಸಮಾಜದ ಅಧ್ಯಕ್ಷ ಸುನೀಲ ದಳವಿ, ಪ್ರಧಾನ ಕಾರ್ಯದರ್ಶಿ ನಾರಾಯಣ ವೈದ್ಯ, ಮಹೇಶ ಡಾಬಡೆ, ದಲಿತಪರ ಮುಖಂಡ ಗುರುನಾಥ ಹುಳ್ಳಿಕಾಶಿ ಹಾಗೂ ಪ್ರಮುಖರು ಮಾತನಾಡಿ, ಪುತ್ಥಳಿ ತೆರವುಗೊಳಿಸಿದ ಸ್ಥಳದಲ್ಲಿಯೇ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ನೂತನ ಕಂಚಿನ ಪುತ್ಥಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಪುತ್ಥಳಿ ಮರುಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಾಜದ ಮುಖಂಡರಾದ ಪರಶುರಾಮ ತಹಸೀಲ್ದಾರ, ಅರುಣ ಶಿರ್ಕೆ. ದಯಾನಂದ ಚೌಹಾಣ, ರಾಮ ಜಾಧವ, ಮಹೇಂದ್ರ ಚೌಹಾಣ, ಶಿವಾಜಿ ವೈದ್ಯ, ಪದ್ಮಾವತಿ ಮರಾಠೆ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.