ಪ್ರತಿಮೆ ಸರಿಪಡಿಸಿ ಪುನರ್ ನಿರ್ಮಾಣ ಮಾಡುವಂತಾಗಬೇಕು: ಮಂತರ್‌ಗೌಡ

IMG_1128
Published on

ಮಡಿಕೇರಿ: ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಪುನರ್ ನಿರ್ಮಾಣ ಸಂಬಂಧ ಶಾಸಕ ಡಾ.ಮಂತರ್ ಗೌಡ ಹಾಗೂ ಮಾಜಿ ಸಚಿವ ಎಂ.ಸಿ.ನಾಣಯ್ಯರವರ ಉಪಸ್ಥಿತಿಯಲ್ಲಿ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಕ್ಯಾಂಟೀನ್ ಸಭಾಂಗಣದಲ್ಲಿ ಸುದೀರ್ಘ ಸಮಾಲೋಚನಾ ಸಭೆ ನಡೆಯಿತು.


ಸಭೆಯಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡರವರು ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನಿರ್ಮಾಣ ಸಂಬಂಧ ಎಲ್ಲರ ಸಹಕಾರ ಪಡೆಯುವ ನಿಟ್ಟಿನಲ್ಲಿ ಸಭೆ ಆಹ್ವಾನಿಸಲಾಗಿದೆ. ಸದ್ಯ ಈಗಿರುವ ಪ್ರತಿಮೆಯನ್ನು ಸರಿಪಡಿಸಿ ಪುನರ್ ನಿರ್ಮಾಣ ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರತಿಮೆ ನಿರ್ಮಾಣದ ಖರ್ಚು ವೆಚ್ಚವನ್ನು ಭರಿಸಲಾಗುವುದು ಎಂದು ಹೇಳಿದರು.


ಹೊಸ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಈಗಿರುವ ಮಾದರಿಯಲ್ಲಿ ಪ್ರತಿಮೆ ಫಿನಿಶಿಂಗ್ ಬರುತ್ತದೆ ಎಂದು ಹೇಳುವುದು ಕಷ್ಟಸಾಧ್ಯವಾಗಿದೆ. ಜತೆಗೆ ಕಾಲಾವಕಾಶ ಬೇಕಿದೆ. ಆದ್ದರಿಂದ ಈಗಿರುವ ಪ್ರತಿಮೆಯನ್ನು ಸರಿಪಡಿಸಿ ಆದಷ್ಟು ಶೀಘ್ರ ಪ್ರತಿಮೆ ಪುನರ್ ಸ್ಥಾಪಿಸುವುದು ಅತ್ಯಗತ್ಯವಾಗಿದೆ ಎಂದು ಡಾ.ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.


ಈಗಿರುವ ಸ್ಥಳದ ಬದಲಾವಣೆ ಇಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಅಭಿಪ್ರಾಯ ನೀಡುವಂತಾಗಬೇಕು ಎಂದರು.


ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತನಾಡಿ, ಈಗಿರುವ ಪ್ರತಿಮೆಯನ್ನು ತ್ವರಿತವಾಗಿ ಪುನರ್ ಸ್ಥಾಪಿಸಬೇಕು. ೫೦ ವರ್ಷಗಳ ಹಿಂದೆ ಪ್ರತಿಮೆ ಸ್ಥಾಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗಿತ್ತು. ಜನರಲ್ ತಿಮ್ಮಯ್ಯರವರ ೩೦-೩೫ ಪೋಟೋಗಳನ್ನು ಸಂಗ್ರಹಿಸಿ ಅದರಲ್ಲಿ ಎತ್ತರದ ಪೋಟೋವನ್ನು ಆಯ್ಕೆ ಮಾಡಿ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಈ ರೀತಿಯ ಪ್ರತಿಮೆ ನಿರ್ಮಿಸುವುದು ಕಷ್ಟಸಾಧ್ಯವಾಗಲಿದೆ. ಆದ್ದರಿಂದ ಹೊಸ ಪ್ರತಿಮೆ ಬದಲಾಗಿ, ಈಗಿರುವ ಪ್ರತಿಮೆಯನ್ನು ಸರಿಪಡಿಸಿ ಪುನರ್ ಸ್ಥಾಪಿಸಬೇಕಿದೆ ಎಂದು ಹೇಳಿದರು.


ಪ್ರತಿಮೆ ನಿರ್ಮಾಣ ಸಂಬಂಧ ಜಿಲ್ಲಾಡಳಿತ, ನಗರಸಭೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಸಂಚಾರ ದಟ್ಟಣೆ, ನಿಯಂತ್ರಣ ಸಂಬಂಧ ಪೊಲೀಸ್ ಇಲಾಖೆ ಅಗತ್ಯ ಕ್ರಮವಹಿಸಬೇಕು. ಒಂದು ತಿಂಗಳೊಳಗೆ ಪ್ರತಿಮೆ ಪುನರ್ ಸ್ಥಾಪಿಸಬೇಕು ಎಂದು ತಿಳಿಸಿದರು.


ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಪ್ರತಿಮೆ ನಿರ್ಮಾಣ ಸಂಬಂಧ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಪ್ರತಿಮೆ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಪ್ರತಿಮೆ ರಿಪೇರಿ ಸಂಬಂಧ ಅಂದಾಜು ಪಟ್ಟಿ ತಯಾರಿಸಲಾಗಿದೆ. ಹಾಗೆಯೇ ಪ್ರತಿಮೆ ಜಾಗದಲ್ಲಿ ಪೌಂಡೇಶನ್ ನಿರ್ಮಾಣ ಮತ್ತಿತರ ಸಂಬಂಧ ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.


ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಮಾತನಾಡಿ, ಮಡಿಕೇರಿ ನಗರಸಭೆ ವ್ಯಾಪ್ತಿಗೆ ಜಾಗ ಬರಲಿದೆ. ಹಾಗಾಗಿ ನಗರಸಭೆ ಮತ್ತು ಪೊಲೀಸ್ ಇಲಾಖೆ ಸಂಚಾರ ನಿಯಂತ್ರಣ ಬಗ್ಗೆ ಕ್ರಮವಹಿಸಬೇಕಿದೆ ಎಂದು ತಿಳಿಸಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು ಎಂದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಪ್ರತಿಮೆ ಪುನರ್ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿರವರ ನೇತೃತ್ವದಲ್ಲಿಯೇ ಕಾರ್ಯಚಟುವಟಿಕೆ ನಡೆಯಲಿದೆ. ಎಲ್ಲಾ ಅಧಿಕಾರಿಗಳು, ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಸಲಹೆ ಮಾಡಿದರು.


ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ಪ್ರವೀಣ್ ಕುಮಾರ್, ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಗೀತಾ, ಪೌರಾಯುಕ್ತ ವಿಜಯ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸಿದ್ದೇಗೌಡ, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಧನಂಜಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ, ಪ್ರಮುಖರಾದ ತೆನ್ನಿರಾ ಮೈನಾ, ಪುಲಿಯಂಡ ಜಗದೀಶ್, ಮಂಜು ಚಿನ್ನಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಚೆಯ್ಯಂಡ ಸತ್ಯ, ಟಿ.ಪಿ.ರಮೇಶ್, ಚುಮ್ಮಿ ದೇವಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net