

ಕಳಸ: ಐತಿಹಾಸಿಕ ಕಳಸ ಸಾವಿರ ಸೀಮೆಯಲ್ಲಿ ಆಡಳಿತ ನಡೆಸಿದ್ದ ತನೂಡಿ ಹೆಗ್ಗಡೆ ಮನೆತನದ ಉಲ್ಲೇಖ ಇರುವ ತೀರ್ಥಂಕರ ಅಪರೂಪದ ಪ್ರತಿಮಾ ಶಾಸನ ಹೊರನಾಡಿನ ಮಣ್ಣಿನಪಾಲು ಪಟೇಲರ ಮನೆಯಲ್ಲಿ ದೊರೆತಿದೆ.
ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಅವರು ಶಾಸನದ ಬಗ್ಗೆ ಅಧ್ಯಯನ ನಡೆಸಿದ್ದು, ಪಟೇಲ್ ಮನೆತನದ ಪುಟ್ಟಣ್ಣ ಸೆಟ್ಟರ ಮನೆಯಲ್ಲಿ ವಿಶೇಷ ದಿನಗಳಲ್ಲಿ ಪೂಜೆ, ಅಭಿಷೇಕ ನಡೆಯುವ ಬಳಪದ ಕಲ್ಲಿನ ಚತುವಿರ್ಂಶತಿ ತೀಥರ್ಂಕರರ ಸಹಿತ ಪಾರ್ಶ್ವನಾಥ ಸ್ವಾಮಿಯ ಪುಟ್ಟ ಪಂಚಕಲ್ಯಾಣ ವಿಗ್ರಹದ ಹಿಂಭಾಗದಲ್ಲಿ ಮೂರು ಸಾಲಿನ ತನೂಡಿ ಚಿಕ್ಕೀರು ಹೆಗ್ಗಡೆಯವರು, ಬೈಸುಗಾರ ಬಸದಿಗೆ ಚತುವಿರ್ಂಶತಿ ತೀಥರ್ಂಕರರ ವಿಗ್ರಹವನ್ನು ನೀಡಿದರು ಎಂಬ ಉಲ್ಲೇಖವಿರುವ ವಿಜಯನಗರ ಕಾಲದ ಕನ್ನಡ ಲಿಪಿ ಸಾದೃಶ್ಯದ ಕನ್ನಡ ಭಾಷೆಯ ಶಾಸನ ಕಂಡು ಬಂದಿದೆ.
ಭೈರವ ಅರಸರ ಸಮಕಾಲೀನ ಶಾಸನಗಳ ಅಧ್ಯಯನದ ಹಿನ್ನೆಲೆಯಲ್ಲಿ ಈ ಶಾಸನವು 15ನೇ ಶತಮಾನದ ಮೂರು ಅಥವಾ ನಾಲ್ಕನೇ ದಶಕದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಶಾಸನದ ಮೂಲಕ ತನೂಡಿ ಮನೆತನದವರು ಜೈನ ಧರ್ಮೀಯರಾಗಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಶಾಸನದ ಕ್ಷೇತ್ರ ಕಾರ್ಯಕ್ಕೆ ಎಂ.ವಿ.ಪುಟ್ಟಣ್ಣಶೆಟ್ಟಿ, ಎಂ.ವಿ.ಸನತ್ ಮಣ್ಣಿನಪಾಲು, ಕುಮಾರ್ ಸೆಟ್ಟಿ, ಮಹಾವೀರ ಜೈನ್ ನೆರವಾಗಿದ್ದರು. ಮೈಸೂರಿನ ಶಾಸನ ತಜ್ಞ ಎಚ್.ಎಂ.ನಾಗರಾಜರಾವ್ ಶಾಸನ ಅಧ್ಯಯನದಲ್ಲಿ ಮಾರ್ಗದರ್ಶನ ನೀಡಿದ್ದರು.