ರಾಜ್ಯದ್ಯಂತ ಹೈಅಲರ್ಟ್ ೋಷಣೆ

police
Published on

ಬೆಂಗಳೂರು: ಅಯೋಧ್ಯೆಯಲ್ಲಿ ಸೋಮವಾರ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಪೊಲೀಸ್ ಹೈಅಲರ್ಟ್ ಘೋಷಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವಂತೆ ಆಯಾ ವಲಯ ಐಜಿಪಿ, ಜಿಲ್ಲಾ ವರಿಷ್ಠಾಧಿಕಾರಿಗಳು ಹಾಗೂ ಘಟಕದ ಹಿರಿಯ ಅಧಿಕಾರಿಗಳಿಗೆ ರಾಜ್ಯ ಕಾನೂನು ಮತ್ತು ವ್ಯವಸ್ಥೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ.
ಬೆಂಗಳೂರು ಹೊರತು ಪಡಿಸಿ ರಾಜ್ಯದ ಎಲ್ಲೆಡೆ ಹೆಚ್ಚುವರಿಯಾಗಿ ೧೫೦ ಕೆಎಸ್‌ಆರ್‌ಪಿ, ೨೫೦ ಸಿಎಆರ್/ಡಿಎಆರ್ ತುಕಡಿಗಳು, ಈ ಹಿಂದೆ ಮತೀಯ ಗಲಭೆಗೆ ಸಾಕ್ಷಿಯಾದ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇದರೊಂದಿಗೆ ಸೋಮವಾರದಿಂದಲೇ ರಾತ್ರಿ ಗಸ್ತು ಹೆಚ್ಚಳ ಮಾಡಲಾಗಿದೆ. ಹೊಯ್ಸಳ, ಚಿತಾ ವಾಹನಗಳ ಗಸ್ತು ಹೆಚ್ಚಿಸಲಾಗಿದೆ ಎಂದು ಆದೇಶ ನೀಡಲಾಗಿದೆ.
ಅಲ್ಲದೆ, ರಾಜ್ಯದ ಎಲ್ಲ ದೇವಾಲಯಗಳು, ಮಸೀದಿ, ಚರ್ಚ್‌ಗಳು ಸೇರಿ ಪ್ರಾರ್ಥನಾ ಮಂದಿಗಳ ಬಳಿ ಹೆಚ್ಚಿನ ಪೊಲೀಸರ ನಿಯೋಜಿಸಲಾಗಿದೆ.
ಜತೆಗೆ ಸಾಮಾಜಿಕ ಜಾಲತಾಣಗಳಾದ ಎಕ್ಸ್, ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂಗಳ ಮೇಲೆ ಪೊಲೀಸ್ ಇಲಾಖೆಯ ಸೋಷಿಯಲ್ ಮೀಡಿಯಾ ಘಟಕ ನಿಗಾವಹಿಸುತ್ತದೆ. ನಗರ/ಗ್ರಾಮೀಣ ಭಾಗದಲ್ಲಿ ಪ್ರಚೋದನಾತ್ಮಕ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಅಳವಡಿಸುವವರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಆಯಾ ಪೊಲೀಸ್ ಠಾಣೆಗಳ ರೌಡಿಶೀಟರ್‌ಗಳು, ಹಳೆಯ ಆರೋಪಿಗಳು, ಈ ಹಿಂದೆ ಕೋಮುಗಲಭೆ ಸೃಷ್ಟಿಸಿದ ವ್ಯಕ್ತಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net