

ತುಮಕೂರು : ರೈಲ್ವೆ ಯೋಜನೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಮಪಾಲು ಬಂಡವಾಳ ಹೂಡಿಕೆ ಮಾಡಬೇಕಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದೆ ಅಸಹಕಾರ ತೋರುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಶೆಟ್ಟಿಹಳ್ಳಿ ಹಳೇ ರೈಲ್ವೆ ಗೇಟ್ ಬಳಿ 2.49 ಕೋಟಿ ರೂ. ವೆಚ್ಚದ ಪಾದಚಾರಿ ಸುರಂಗ ಮಾರ್ಗ ಹಾಗೂ ಭೀಮಸಂದ್ರದ ರೈಲ್ವೆ ಕೆಳ ಸೇತುವೆ ಕಾಮಗಾರಿಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುವುದಿಲ್ಲ ಎನ್ನುವದನ್ನು ಅರ್ಥ ಮಾಡಿಕೊಂಡು ಸೇತುವೆಗಳ ನಿರ್ಮಾಣಕ್ಕೆ ನೂರಕ್ಕೆ ನೂರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿದೆ ಎಂದರು.
ಈಗ ಎರಡು ಸಬ್ವೇಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು, 7 ತಿಂಗಳೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ಭರವಸೆ ನೀಡಿದ ಸಚಿವರು, ರೈಲ್ವೆ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳಿಗೆ ಈ ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಹಣ ನೀಡುತ್ತಿದ್ದವು. ಆದರೆ ರಾಜ್ಯ ಸರ್ಕಾರದಿಂದ ಬಿಡಿಕಾಸೂ ಕೊಟ್ಟಿಲ್ಲ. ಹಾಗಾಗಿ ಯಾರನ್ನೂ ನೆಚ್ಚಿಕೊಳ್ಳದೆ ದೇಶಾದ್ಯಂತ ಎಲ್ಲ ಕಡೆಗಳಲ್ಲಿ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳನ್ನು ಕೇಂದ್ರ ಸರ್ಕಾರವೇ ಮಾಡುತ್ತಿದೆ ಎಂದರು.
ಏ.30 ರೊಳಗೆ 700 ಕೋಟಿ ರೂ.ವೆಚ್ಚದಲ್ಲಿ ತುಮಕೂರು ಹಾಗೂ ಹಾಸನ ಜಿಲ್ಲೆಯ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಈ ಕಾಮಗಾರಿಗಳನ್ನು 2027 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ, ಮಾಜಿ ಸಂಸದ ಜಿ.ಎಸ್. ಬಸವರಾಜು, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಮಿತೇಶ್ಕುಮಾರ್ ಸಿನ್ಹಾ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ಪೂರಿಯಾ, ಕೃಷ್ಣಚೈತನ್ಯ, ಮಂಜುನಾಥ ಕನಮಡಿ, ರಾಜೀವ್ ಶಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ಇದ್ದರು.
ಸಿದ್ಧಗಂಗಾ ಶ್ರೀ ಹೆಸರಿಡಲು ಸಿಎಂ ಮೀನಮೇಷ
ತುಮಕೂರಿನ ರೈಲು ನಿಲ್ದಾಣಕ್ಕೆ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿಡಲು ಕೇಂದ್ರ ಸರ್ಕಾರ ಸಮ್ಮತಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು 5 ತಿಂಗಳಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಪತ್ರಕ್ಕೆ ಸಹಿ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ವಿ.ಸೋಮಣ್ಣ ಬೇಸರಿಸಿದರು.
ಸಿದ್ಧ್ದಗಂಗಾ ಶ್ರೀಗಳ ಹೆಸರಿಡುವ ಸಂಬಂಧ ನಾನೇ ಖುದ್ದು ನಾಲ್ಕೆ$ದು ಬಾರಿ ಸಿಎಂ ಭೇಟಿ ಮಾಡಿದ್ದೇನೆ. ಸರ್ಕಾರದ ಮುಖ್ಯಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ್ದೇನೆ. ಆದರೂ ಕೇಂದ್ರ ಸರ್ಕಾರದ ಪತ್ರಕ್ಕೆ ಸಹಿ ಮಾಡಲು ಸಿದ್ದರಾಮಯ್ಯ ಮನಸ್ಸು ಮಾಡುತ್ತಿಲ್ಲ. ಪುಣ್ಮಾತ್ಮನ ಹೆಸರಿಡಲು ಇಷ್ಟೊಂದು ಅಸಡ್ಡೆ ತೋರಿದರೆ ಮುಂದೊಂದು ದಿನ ಬೆಲೆ ತೆರಬೇಕಾಗುತ್ತದೆ ಎಂದರು. ರಾಜ್ಯ, ಕೇಂದ್ರ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡಬೇಕು. ಈ ರೀತಿ ವಿಳಂಬ ಧೋರಣೆ ಸರಿಯಲ್ಲ. ಕೂಡಲೇ ಸಿಎಂ ಗಮನ ಹರಿಸಿ ಕೇಂದ್ರದ ಪತ್ರಕ್ಕೆ ಸಹಿ ಹಾಕುವ ಮೂಲಕ ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ದಗಂಗಾ ಶ್ರೀಗಳ ಹೆಸರಿಡಲು ಕೈಜೋಡಿಸಬೇಕು. ತುಮಕೂರು ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು 95 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದು, ಟೆಂಡರ್ ಕೂಡ ಆಗಿದೆ. ಜನ ನಮಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಅದಕ್ಕೆ ಬದ್ಧರಾಗಿ ನಾವು ಕೆಲಸ ಮಾಡಬೇಕು ಎಂದರು.
ನಮೋ ರ್ಯಾಪಿಡ್ ರೈಲು
ತುಮಕೂರು ಮೆಟ್ರೋ ರೈಲು ವಿಸ್ತರಣೆಗೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಆ ನಿಟ್ಟಿನಲ್ಲಿ ಏನು ಕ್ರಮವಹಿಸಬೇಕು ಅದನ್ನು ಮಾಡುತ್ತಿದ್ದೇವೆ. ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ನಗರದ ಹೊರವಲಯದ ಸುತ್ತ 287 ಕಿ.ಮೀ., ಸಕ್ಯೂರ್ಲರ್ ರೈಲು (ವರ್ತುಲ ರೈಲು) ಜಾಲ ರೂಪಿಸಲು ನೀಲಿನೆ ತಯಾರಿಸಲಾಗಿದೆ. ಇದರ ಜತೆಗೆ ತುಮಕೂರು&ಬೆಂಗಳೂರು ಮೆಮು ರೈಲು ಓಡಿಸುತ್ತಿದ್ದು, ಇದೀಗ ಮೈಸೂರಿಗೂ ವಿಸ್ತರಣೆ ಮಾಡಿದ್ದೇವೆ. ಬೆಂಗಳೂರು&ತುಮಕೂರು, ಹಾಸನ&ಮೈಸೂರು ನಡುವೆ ನಮೋ ರ್ಯಾಪಿಡ್ ರೈಲು ಓಡಿಸುವ ಚಿಂತನೆ ಇದೆ ಎಂದು ಸೋಮಣ್ಣ ತಿಳಿಸಿದರು.
ಚಂಡಾಲ ಇದ್ದೀನಿ ನಾನು... !
ಮಾಜಿ ಸಂಸದ ಜಿ.ಎಸ್.ಬಸವರಾಜುಗೆ ನಾನೇ ಕಾರ್ಯಕ್ರಮಕ್ಕೆ ಕರೆದಿದ್ದು, ನಾನು ಇರುವವರೆಗೆ ನಮ್ಮ ಜತೆಗಿರಿ, ನಿಮ್ಮ ಮಾರ್ಗದರ್ಶನ ಪಡೆಯುತ್ತೇವೆ. ಹಾಗೆಂದು ನೂರಕ್ಕೆ ನೂರರಷ್ಟು ನಿಮ್ಮ ಮಾತು ಕೇಳುವವನು ನಾನಲ್ಲ. ನಾನು ಸ್ವಲ್ಪ ಚಂಡಾಲ ಇದ್ದೀನಿ. ನನ್ನದೇ ಆದ ದೂರ ದೃಷ್ಟಿಯಿದೆ, 40 ವರ್ಷದ ಅನುಭವವಿದೆ ಹೀಗೆಂದು ಸೋಮಣ್ಣ ನಗುತ್ತಲೇ ಹೇಳಿದ್ದು ಬಿಜೆಪಿ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚುನಾವಣೆ ವೇಳೆ ಖರೀದಿಸಿದ್ದ ಮನೆ ಕೆಡಹುವ ಚಿಂತನೆಯಿದ್ದು, ಅದೇ ಜಾಗದಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತೇನೆ. ಬೇರೆ ಕಡೆ ಮನೆ ಕಟ್ಟುವ ಮನಸ್ಸಿತ್ತು. ಆ ಮನೆ ಅದೃಷ್ಟದಿಂದ ಕೂಡಿದ್ದು ಅಲ್ಲೇ ಮನೆ ಕಟ್ಟಿ ಅಂತ ನಮ್ಮ ಶ್ರೀಮತಿಯವರು ಹೇಳಿರುವುದರಿಂದ ಅಲ್ಲೇ ಹೊಸ ಮನೆ ನಿರ್ಮಿಸುವುದಾಗಿ ಹೇಳಿದರು.
ರೈಲು ಬಿಡಲು ಬಂದಿಲ್ಲ !
ಈ ಸೋಮಣ್ಣ ರೈಲು ಬಿಡಲು ಬಂದಿಲ್ಲ. ಟ್ರಾ$್ಯಕ್ನಲ್ಲಿ ರೈಲನ್ನು ಓಡಿಸುತ್ತೇನೆ. ಬೆಂಗಳೂರಿನಲ್ಲಿ ಕೂತಿರುತ್ತಿದ್ದ ಭೂಸ್ವಾಧಿನಾಧಿಕಾರಿ ತುಮಕೂರಿಗೆ ಬಂದರೆ ರಾಜ ಬಂದ ಹಾಗೇ ಆಗುತ್ತಿತ್ತು. ರೈತರಿಗೆ ಹಣ ಕೊಡುವುದರಲ್ಲೂ ಅನ್ಯಾಯವಾಗುತ್ತಿತ್ತು. ಭೂಸ್ವಾಧಿನ ಕಚೇರಿ ತುಮಕೂರಿನಲ್ಲೇ ಪ್ರಾರಂಭವಾಗಿದೆ. ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳು ನಾನು ಅಂದುಕೊಂಡಂತೆ ಪೂರ್ಣಗೊಳ್ಳಲಿವೆ ಎಂದು ಕೇಂದ್ರ ಸಚಿವ ಸೋಮಣ್ಣ ಹೇಳಿದರು.