ವಿಚಾರಣೆ ಬಲೆಯಲ್ಲಿ ರಾಜ್ಯದ 112 ಬಿಇಒಗಳು!

Beo
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ದಶಕಗಳ ಹಿಂದೆ ಕಡಿಮೆ ಭ್ರಷ್ಟಾಚಾರದ ಇಲಾಖೆಯಾಗಿ ಗುರುತಿಸಿ ಕೊಂಡಿದ್ದ ಶಿಕ್ಷಣ ಇಲಾಖೆಯೂ ದಿನಗಳೆದಂತೆ ಅಪಖ್ಯಾತಿಗೆ ಈಡಾಗುತ್ತಿದೆ. ಇಲ್ಲಿ ಪ್ರಮುಖ ಪಾತ್ರ ವಹಿಸುವ ಕ್ಷೇತ್ರ ಶಿಕ್ಷಣಾಧಿಕಾರಿ ಹಂತದ ಹುದ್ದೆಯಲ್ಲಿ ಭ್ರಷ್ಟಾಚಾರ, ಹಣ ದುರ್ಬಳಕೆ, ಅಧಿಕಾರ ದುರುಪಯೋಗದ ಪ್ರಕರಣಗಳು ಮೇರೆ ಮೀರುತ್ತಿದೆ.

ರಾಜ್ಯದಲ್ಲಿ ಶೇ.25ಕ್ಕಿಂತ ಹೆಚ್ಚು ಬಿಇಒಗಳು ಆರೋಪಗಳಿಗೆ ವಿಚಾರಣೆ ಎದುರಿಸುತ್ತಿರುವುದು ಇದಕ್ಕೆ ನಿದರ್ಶನ. ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರವೇ ರಾಜ್ಯದ 112 ಬಿಇಒಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇದೆ. ಅಂದರೆ ಪ್ರಕರಣಗಳು ಇತ್ಯರ್ಥವಾಗದೆ, ಕಳಂಕದಿಂದ ಮುಕ್ತರಾಗದೆಯೇ ಕರ್ತವ್ಯದಲ್ಲಿ ಮುಂದುವರಿದಿದ್ದಾರೆ. ಈ ಕಳಂಕಿತರ ಪೈಕಿ 31 ಅಧಿಕಾರಿಗಳು ಪ್ರಸ್ತುತ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಯಲ್ಲೇ ಇವರನ್ನು ನಿಯುಕ್ತಿಗೊಳಿಸಬೇಕಾಗಿದೆ. ಇಲಾಖಾ ವಿಚಾರಣೆಯಲ್ಲಿರುವವರಿಗೆಲ್ಲ ಬಿಇಒ ಹುದ್ದೆ ನೀಡುವುದಿಲ್ಲ ಎಂದಾದರೆ ಯಾರಿಂದ ಈ ಕೆಲಸ ಮಾಡಿಸ ಬೇಕು’ ಎಂಬುದು ಎಂದು ಹಿರಿಯ ಅಧಿಕಾರಿಗಳ ಪ್ರಶ್ನೆ.

ಅಧಿಕಾರಿಗಳ ವಾದವೇನು?

ಇಲಾಖೆ ವಿಚಾರಣೆ ಎದುರಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಬೇರೆ ಹುದ್ದೆಗೆ ವರ್ಗಾಯಿಸಬೇಕೆಂಬ ಚಿಂತನೆ ಇದೆ. ಬಿಇಒನಂತಹ ಪ್ರಮುಖ ಎಕ್ಸಿಕ್ಯುಟಿವ್ ಹುದ್ದೆಯಲ್ಲಿ ವಿಚಾರಣೆ ಎದುರಿಸುವ ಅಧಿಕಾರಿಗಳನ್ನು ನಿಯೋಜಿಸುವುದು ಸರಿಯಲ್ಲ ಎಂಬುದರ ಅರಿವಿದೆ. ಪರ್ಯಾಯ ಕ್ರಮ ಕೈಗೊಳ್ಳುವ ಆಲೋಚನೆ ಇದೆ ಎಂದೂ ಅಧಿಕಾರಿಗಳು ವಿವರಿಸುತ್ತಾರೆ.

ಅಧಿಕಾರಿಗಳ ಮಾಸಿಕ ಖರ್ಚಿಗಾಗಿ ವಸೂಲಿ

ಬಿಇಒ ಕಚೇರಿ ಸಿಬ್ಬಂದಿ ಪ್ರಕಾರ ಕಟ್ಟಡ ನಿರ್ವಣ, ಖರೀದಿ, ಅನುದಾನಿತ ಶಾಲೆಗಳಿಗೆ ಅನುದಾನ ಬಿಡುಗಡೆ ವೇಳೆ ವಸೂಲಿ ಮಾಡುವ ಪರಿಪಾಠ ಬೆಳೆದುಬಂದಿದೆ. ಸ್ಥಳೀಯ ರಾಜಕಾರಣಿಗಳಿಗೆ, ಮೇಲಧಿಕಾರಿಗಳ ಮಾಸಿಕ ಖರ್ಚಿಗೆ ಬಿಇಒಗಳು ಅನಿವಾರ್ಯವಾಗಿ ವಸೂಲಿಗಿಳಿಯುವುದು ಸಾಮಾನ್ಯ. ಹಾಗಂತ ರಾಜ್ಯದ ಎಲ್ಲ ಕಡೆಯೂ ಈ ರೀತಿ ಇಲ್ಲ. ಶಿಕ್ಷಕರ ಮೇಲೆ ನಿಗಾ ಇಡುವುದು, ಅವರ ಆಗುಹೋಗು, ಸಂಬಳ ಭತ್ಯೆಯ ಕೆಲಸದ ಜತೆ ಪ್ರಮುಖವಾಗಿ ತಾಲೂಕಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಹೊಣೆ ಬಿಇಒಗಳದ್ದು. ಆದರೆ, ಈ ಕೆಲಸ ಆಗುತ್ತಿಲ್ಲ ಎಂಬ ವಾದವೂ ಇದೆ.

ಡಯಟ್ ಎಂಬ ಆಶ್ರಯ ತಾಣ

ತಾಲೂಕುಗಳಲ್ಲಿನ ಬಿಇಒ ಕಚೇರಿ, ಜಿಲ್ಲಾ ಕೇಂದ್ರದಲ್ಲಿನ ಡಯಟ್ ಹಾಗೂ ರಾಜ್ಯದ ವಿವಿಧ ಕಡೆ ಸಿಟಿಇ ಕೇಂದ್ರಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತತ್ಸಮಾನ ಹುದ್ದೆಗಳಿವೆ. ಡಯಟ್​ನಲ್ಲಿ ಕೆಲಸವಿಲ್ಲದೆಯೇ ಕುಳಿತ ಬಿಇಓಗಳೂ ಇದ್ದಾರೆ. ಒಟ್ಟಾರೆ, 450ಕ್ಕಿಂತ ಹೆಚ್ಚು ಮಂದಿ ಈ ಶ್ರೇಣಿಯವರಿದ್ದಾರೆ.ಇದೇ ವೇಳೆ ಕೆಲಸ ಮಾಡುವ ಉತ್ಸಾಹವಿಲ್ಲದವರು ಮತ್ತು ಸ್ಥಳೀಯ ರಾಜಕೀಯ ಒತ್ತಡದ ಕಾರಣಕ್ಕೆ ಬೆದರುವ ಬಿಇಒಗಳು ಡಯಟ್​ಗಳನ್ನು ಆಶ್ರಯ ತಾಣವಾಗಿ ಮಾಡಿಕೊಂಡಿದ್ದಾರೆಂಬ ಮಾತುಗಳೂ ಶಿಕ್ಷಣ ಇಲಾಖೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net