

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಜನೌಷಧ ಕೇಂದ್ರ ಮುಚ್ಚುವ, ಸರ್ಕಾರಿ ಆಸ್ಪತ್ರೆಗೆ ನೀರಿನ ಸಮಸ್ಯೆ, ಸರ್ವೀಸ್ ರಸ್ತೆಗಳಲ್ಲಿ ಮಳೆ ನೀರು ನಿಲ್ಲುವುದು, ವಿದ್ಯುತ್ ಕಡಿತ, ವಿದ್ಯುತ್ ಕಂಬ ಅಳವಡಿಕೆಗೆ ವಿಳಂಬ ಮೊದಲಾದ ವಿಷಯಗಳು ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಕುಂದಾಪುರ ಪುರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.
ರಾಜ್ಯಾದ್ಯಂತ ಜನೌಷಧ ಕೇಂದ್ರ ಮುಚ್ಚಲಾಗುತ್ತದೆ ಎಂಬ ವಿಚಾರ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ಸಂತೋಷ ಶೆಟ್ಟಿ, ಬಡವರಿಗೆ ಕಡಿಮೆ ದರದಲ್ಲಿ ಔಷಧ ನೀಡುತ್ತಿರುವ ಜನೌಷಧ ಕೇಂದ್ರ ಮುಚ್ಚಲಾಗುತ್ತದೆ ಎಂದು ಸಚಿವರು ಹೇಳಿಕೆ ನೀಡಿರುವುದು ಖಂಡನೀಯ. ಜನೌಷಧ ಕೇಂದ್ರದ ಮೂಲಕ ಜನರಿಗೆ ಪ್ರಯೋಜನವಾಗಿದೆ. ಜನೌಷಧ ಕೇಂದ್ರ ಮುಚ್ಚುವ ಕ್ರಮ ಸರ್ಕಾರದ ಮುಂದಿಲ್ಲ. ಸಚಿವರು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಈ ಬಗ್ಗೆ ದಾಖಲೆ ತೋರಿಸಿ ಎಂದು ಸದಸ್ಯರಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರುಗಾರ್, ಅಬು ಮೊಹಮ್ಮದ್ ಹೇಳಿದರು. ಈ ಸಂದರ್ಭ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ದಾರಿದೀಪ, ವಿದ್ಯುತ್ ಕಂಬ ಅಳವಡಿಸಲು ಮೆಸ್ಕಾಂಗೆ ಪ್ರಸ್ತಾವನೆ ಸಲ್ಲಿಸಿದರೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಪುರಸಭೆಯಿಂದ ಶೇ.10ರಷ್ಟು ಹಣ ಪಾವತಿಸಿದರೂ ಅನುಮತಿ ನೀಡಿಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಮೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದರು.
ಹೊಸ ಕಂಬ ಹಾಕಲು ಅರ್ಜಿ ನೀಡಿದರೂ ಈವರೆಗೆ ಹಾಕಿಲ್ಲ. ದಾರಿದೀಪ ಅಳವಡಿಸುವ ಸಂಬಂಧ ಮೆಸ್ಕಾಂ ಅಧಿಕಾರಿಗಳು ಕರೆ ಮಾಡಿಲ್ಲ ಎಂದು ಸದಸ್ಯ ಸಂತೋಷ ಶೆಟ್ಟಿ ಆರೋಪಿಸಿದರು. ಹೊಸ ಬಸ್ ಸ್ಟಾೃಂಡ್ ಬಳಿ ಹೊಸ ಕಂಬ, ಹೈಮಾಸ್ಟ್ ದೀಪ ಅಳವಡಿಸಬೇಕೆಂದು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ಸದಸ್ಯೆ ಪ್ರಭಾವತಿ ಶೆಡ್ತಿ ಆರೋಪಿಸಿದರು.
ಹಲವೆಡೆ ಫುಟ್‌ಪಾತ್ ಮೇಲೆ ವಿದ್ಯುತ್ ಕಂಬ ಹಾಕಲಾಗಿ ಸಮಸ್ಯೆಗಳಾಗುತ್ತಿದೆ ಎಂದು ಸದಸ್ಯ ಶ್ರೀಧರ ಶೇರುಗಾರ್ ಹೇಳಿದರು. ಪುರಸಭೆ ವ್ಯಾಪ್ತಿಯ ಚರಂಡಿಗಳಲ್ಲಿ ವಿದ್ಯುತ್ ಕಂಬ ಇರುವುದರಿಂದ ನೀರು ಹರಿದು ಹೋಗಲು ಅಡ್ಡಿಯಾಗುತ್ತಿದೆ. ಚರಂಡಿಗಳಲ್ಲಿರುವ ವಿದ್ಯುತ್ ಕಂಬ ಸ್ಥಳಾಂತರ ಮಾಡಲು ಸಾಧ್ಯವೇ ಎಂದು ಮುಖ್ಯಾಧಿಕಾರಿ ಆನಂದ ಜೆ.ಪ್ರಶ್ನಿಸಿದರು.
ಕುಂದಾಪುರ ನೆಹರು ಮೈದಾನವನ್ನು ಪುರಸಭೆಗೆ ಹಸ್ತಾಂತರಿಸುವ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಸದಸ್ಯ ಸಂತೋಷ ಶೆಟ್ಟಿ ಪ್ರಶ್ನಿಸಿದರು. ನೆಹರು ಮೈದಾನವನ್ನು ಪುರಸಭೆಗೆ ಹಸ್ತಾಂತರಿಸುವ ಪ್ರಸ್ತಾವನೆ ಉಪವಿಭಾಗಾಧಿಕಾರಿಗೆ ಕಳುಹಿಸಿಕೊಡಲಾಗಿದೆ. ನೆಹರು ಮೈದಾನದ 1.35 ಎಕರೆ ಸ್ಥಳವನ್ನು ಪುರಸಭೆಗೆ ಕಾಯ್ದಿರಿಸುವ ಬಗ್ಗೆ ಉಪವಿಭಾಗಾಧಿಕಾರಿಗೆ ಕಡತ ಸಲ್ಲಿಸಲಾಗಿದೆ ಎಂದು ಉಪ ತಹಸೀಲ್ದಾರ್ ಪ್ರಕಾಶ್ ಪೂಜಾರಿ ಮಾಹಿತಿ ನೀಡಿದರು.
ಕಂದಾಯ ಇಲಾಖೆ ಜಾಗದಲ್ಲಿ ಖಾಸಗಿ ಕಾಲೇಜು ನಿರ್ಮಿಸಿಕೊಂಡಿರುವ ವಾಣಿಜ್ಯ ಸಂಕೀರ್ಣವನ್ನು ಜಪ್ತಿ ಮಾಡಲಾಗಿದ್ದರೂ, ಈವರೆಗೆ ಅನೇಕ ಅಂಗಡಿ ಕಾರ್ಯನಿರ್ವಹಿಸುತ್ತಿದೆ. ಅಕ್ರಮವಾಗಿ ಕಟ್ಟಿಕೊಂಡಿರುವ ಕಟ್ಟಡದ ಬಗ್ಗೆ ಕ್ರಮಕೈಗೊಳ್ಳದೆ ಯಾಕೆ ಮೌನ ವಹಿಸಲಾಗಿದೆ ಎಂದು ಸದಸ್ಯ ಚಂದ್ರಶೇಖರ ಖಾರ್ವಿ ಕೇಳಿದರು. ಈ ವಿಚಾರ ನ್ಯಾಯಾಲಯದಲ್ಲಿದೆ ಎಂದು ಉಪತಹಸೀಲ್ದಾರ್ ಪ್ರಕಾಶ್ ಪೂಜಾರಿ ಹೇಳಿದರು. ಟಿ.ಟಿ. ರಸ್ತೆಯಲ್ಲಿ ಅಂಗನವಾಡಿ ಕಟ್ಟಡಕ್ಕೆ ಸರ್ಕಾರಿ ಜಾಗ ಕಾಯ್ದಿರಿಸುವ ಬಗ್ಗೆ ಸರ್ವೇ ನಡೆಸಿ ಜಾಗ ಗುರುತಿಸುವಂತೆ ಅಧ್ಯಕ್ಷ ಮೋಹನದಾಸ ಶೆಣೈ ಸೂಚಿಸಿದರು.
ತಾಲೂಕು ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ, ಸ್ವಚ್ಛತೆ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದು, ಪುರಸಭೆಯಿಂದ ಸ್ಪಂದನೆ ಇಲ್ಲ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಅಧ್ಯಕ್ಷರು ಸೂಚಿಸಿದರು. 2-3 ದಿನಗಳ ಹಿಂದೆ ನೀರಿನ ಸಮಸ್ಯೆಯಾಗಿದ್ದು ನಿಜ. ಈಗ ನೀರಿನ ಸಮಸ್ಯೆ ಇಲ್ಲ. ಆಸ್ಪತ್ರೆ ವಠಾರದ ಬಾವಿಯಲ್ಲಿ ಬೇಸಿಗೆ ಅಂತ್ಯದಲ್ಲಿ ನೀರು ಕಡಿಮೆಯಾಗುತ್ತಿದೆ. ಪೈಪ್‌ಲೈನ್ ಸಮಸ್ಯೆ ಸರಿಪಡಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಚಂದ್ರ ಮರಕಾಲ ತಿಳಿಸಿದರು.
ಆಸ್ಪತ್ರೆಯವರು 11 ಲಕ್ಷ ರೂ.ನೀರಿನ ಬಿಲ್ ಬಾಕಿ ಇರಿಸಿಕೊಂಡಿದ್ದರಿಂದ ಪುರಸಭೆಯವರು ನೀರಿನ ಸಂಪರ್ಕ ಕಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ನೀರಿನ ಸಂಪರ್ಕ ಕಡಿತಗೊಳಿಸಿರುವುದು ಸರಿಯಲ್ಲ ಎಂದು ಸದಸ್ಯ ಚಂದ್ರಶೇಖರ ಖಾರ್ವಿ ಹೇಳಿದರು. ಸರ್ಕಾರದಿಂದ ಅನುದಾನ ಬಂದ ಮೇಲೆ ನೀರಿನ ಬಿಲ್ ಪಾವತಿಸುವುದಾಗಿ ವೈದ್ಯಾಧಿಕಾರಿಗಳು ಹೇಳಿದ್ದು, ಬಿಲ್ ಬಾಕಿ ಇದ್ದದ್ದಕ್ಕೆ ನೀರಿನ ಸಂಪರ್ಕ ಕಟ್ ಮಾಡಲಾಗಿದೆ ಎಂಬುದು ಸುಳ್ಳು ಎಂದು ಅಧ್ಯಕ್ಷರು ಹೇಳಿದರು. ಆಸ್ಪತ್ರೆಯಲ್ಲಿ ಕೆಲವು ಔಷಧ ಮಾತ್ರ ದೊರೆಯುತ್ತಿದ್ದು, ಕೆಲವು ಔಷಧ ಹೊರಗೆ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಕೊರತೆ ಇದೆಯೇ ಎಂದು ಸದಸ್ಯ ರಾಘವೇಂದ್ರ ಖಾರ್ವಿ ಪ್ರಶ್ನಿಸಿದರು.
ಸದಸ್ಯ ಚಂದ್ರಶೇಖರ ಖಾರ್ವಿ, ಉಪಾಧ್ಯಕ್ಷೆ ವನಿತಾ ಎಸ್.ಬಿಲ್ಲವ, ಮುಖ್ಯಾಧಿಕಾರಿ ಆನಂದ್ ಜೆ., ಅಧ್ಯಕ್ಷ ಮೋಹನದಾಸ ಶೆಣೈ, ಜೆಇ ರಾಘವೇಂದ್ರ ಉಪಸ್ಥಿತರಿದ್ದರು.
ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಘಟಕಕ್ಕೆ ಎಕ್ಸ್‌ಪ್ರೆಸ್ ವೇ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗಿದ್ದರೂ, ನಿರಂತರ ವಿದ್ಯುತ್ ಕಡಿತದಿಂದ ಜನರೇಟರ್ ಬಳಸಬೇಕಾಗುತ್ತಿದೆ. ಎಕ್ಸ್‌ಪ್ರೆಸ್ ವೇನಲ್ಲಿ ವಿದ್ಯುತ್ ಕಡಿತ ಮಾಡುವುದು ನಿಲ್ಲಿಸಬೇಕು ಎಂದು ಅಧ್ಯಕ್ಷ ಮೋಹನದಾಸ ಶೆಣೈ ಸೂಚಿಸಿದರು.
ಜಿಲ್ಲಾಧಿಕಾರಿಗಳು, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಏನೇನು ಕ್ರಮ ಕೈಗೊಳ್ಳಬೇಕು. ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರೂ ಕ್ರಮಕೈಗೊಂಡಿಲ್ಲ. ಟಿ.ಟಿ.ರಸ್ತೆ, ಬಸ್ರೂರು ಮೂರುಕೈ ಮೊದಲಾದ ಕಡೆ ಸರ್ವೀಸ್ ರಸ್ತೆ ಮೇಲೆ ನೀರು ನಿಂತು ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಆಗುವ ತೊಂದರೆಗೆ ಸಂಬಂಧಪಟ್ಟವರು ಹೊಣೆಗಾರರು. -ಮೋಹನದಾಸ ಶೆಣೈ ಅಧ್ಯಕ್ಷ ಮಾರ್ಚ್ ಒಳಗೆ ನೀಡಿದ ಪ್ರಸ್ತಾವನೆ ಅಂದಾಜು ಪಟ್ಟಿ ಸಿದ್ಧಗೊಂಡು ಅನುಮೋದನೆಗೆ ಕಳುಹಿಸಿಕೊಡಲಾಗಿದೆ. ಬಾಕಿ ಉಳಿದ ಪ್ರಸ್ತಾವನೆಗಳ ಅಂದಾಜುಪಟ್ಟಿ ಸಿದ್ಧಪಡಿಸಲಾಗುವುದು. ಹೊಸ ಕಂಬ ಅಳವಡಿಕೆ, ಕಂಬ ಶಿಫ್ಟ್ ಮಾಡಲು ಪ್ರಸ್ತಾವನೆ ಕಳುಹಿಸಿಕೊಡಬೇಕು. -ರಾಘವೇಂದ್ರ ಜೆಇ https://www.vijayavani.net/rain-disrupts-national-highway https://www.vijayavani.net/a-good-goal-through-self-effort