

ಚನ್ನಗಿರಿ: ಭೂಮಿಯಲ್ಲಿ ಮಾನವರಾಗಿ ಜನಿಸಿದ ಮೇಲೆ ಜೀವನ ಸಾರ್ಥಕ ಪಡಿಸಿಕೊಳ್ಳಲು ಕಾಯಕ, ದಾಸೋಹ ಮತ್ತು ಮಾನವೀಯತೆಯನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಡಾ. ಗುರುಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶರಣ ಒಕ್ಕಲಿಗ ಮುದ್ದಣ್ಣ ಅವರ ಸ್ಮರಣೋತ್ಸವ ಮತ್ತು 866ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವರು ಮನುಷ್ಯನಿಗೆ ಬುದ್ಧಿವಂತಿಕೆ ಮತ್ತು ವಿವೇಚನೆ ಮಾಡುವ ಶಕ್ತಿ ನೀಡಿದ್ದಾನೆ. ಸರಿತಪ್ಪುಗಳ ಅರಿವು ಇರಲಿ, ನಮ್ಮಂತೆಯೇ ಪ್ರಾಣಿಗಳಿಗು ಜೀವ ನೀಡಿದ್ದಾನೆ. ಆದರೆ ಅವುಗಳು ಸಂಘಟಿತರಾಗಿ ಇರುತ್ತವೆ ಯಾರಿಗೂ ನೋವು ಮಾಡುವುದಿಲ್ಲ. ಮನುಷ್ಯ ಪ್ರಾಣಿಗಿಂತ ಕಡೆಯಾಗಿದ್ದಾನೆ ಎಂದರು.
ಕೃಷಿಕ ಮುದ್ದಣ್ಣ ಅವರು ಕಾಯಕದ ಜತೆಗೆ ವಚನಕಾರರಾಗಿ ಒಳ್ಳೆಯಗುಣ, ಆಲೋಚನೆ, ಅಂತಕರಣ, ಅಹಿಂಸೆಗುಣ ಮತ್ತು ಒಳ್ಳೆಯ ಮಾತುಗಳನ್ನಾಡಬೇಕು ಎಂದು ಸಾರಿದರು. ಒಕ್ಕಲಿಗ ಎಂದರೆ ಕೃಷಿಕ. ಅವರ ಸಾಮಾಜಿಕ ಚಿಂತನೆ, ಕಾಳಜಿ ಇಂದಿಗು ಸಮಾಜದಲ್ಲಿ ಮಾದರಿಯಾಗಿದೆ. ಮನುಷ್ಯ ಕೇಳಿಸಿಕೊಳ್ಳುವ, ಮಾತನಾಡುವ ಮತ್ತು ಅನುಸರಿಸುವ ಗುಣ ಒಳ್ಳೆಯದಾಗಿದ್ದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.
ಪ್ರಗತಿಪರ ರೈತ ಎ.ಎಸ್. ಮಹೇಶಣ್ಣ ಮಾತನಾಡಿ, ಉತ್ತಮ ಆರೋಗ್ಯ ಪಡೆಯಬೇಕಾದರೆ ನೈಸರ್ಗಿಕ ಆಹಾರ ಮತ್ತು ಕೃಷಿಗೆ ಮರಳಿದಾಗ ಮಾತ್ರ ಸಾಧ್ಯವಾಗುತ್ತದೆ. ಏಕಾಗ್ರತೆಯಿಂದ ಮತ್ತು ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡುವುದರಿಂದ ಅದು ಜೀರ್ಣಕ್ರಿಯೆ ಮತ್ತು ಒತ್ತಡ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಊಟ ಮಾಡುವ ಸಮಯದಲ್ಲಿ ಮೊಬೈಲ್ ಬಳಸಬೇಡಿ ಎಂದರು.
ದಾವಣಗೆರೆ ಎಸ್‌ಎನ್‌ಆರ್ ಎಲೆಕ್ಟ್ರಿಕಲ್ಸ್ ಮಾಲಿಕ ಎಸ್.ಎನ್. ರುದ್ರೇಶ್ ಮಾತನಾಡಿ, ರೈತರು ವಿದ್ಯುತ್ ಮತ್ತು ನೀರನ್ನು ಮಿತವಾಗಿ ಬಳಸಿ, ಕೃಷಿ ಮಾಡುವ ಪದ್ಧತಿಯನ್ನು ಅನುಸರಿಸಿದಾಗ ಅಂತರ್ಜಲ ಕ್ಷೀಣಿಸುವುದನ್ನು ರಕ್ಷಿಸಬಹುದು. ಅಲ್ಲದೆ ವಿದ್ಯುತ್ ಅಪಘಾತದ ಬಗ್ಗೆ ಎಚ್ಚರವಿರಲಿ ಎಂದರು.
ಅರಸೀಕೆರೆ ಎತ್ತಿನಹೊಳೆ ಯೋಜನೆಯ ಸಹಾಯಕ ಅಭಿಯಂತರ ಕೆ.ಎಂ. ಇಂಧುಕುಮಾರ್ ಪಾಟೀಲ್ ಅವರಿಗೆ ಸನ್ಮಾನಿಸಲಾಯಿತು. ಅಂತಾರಾಷ್ಟ್ರೀಯ ಯೋಗಪಟು ಹರಿಹರದ ಕೆ.ವೈ. ಸೃಷ್ಠಿ, ಕುಮಾರಿ ಡಾ. ಇಂಚರಾ, ಅತ್ತಿಗೆರೆ ಎಚ್.ಕೆ.ದೇವರಾಜು, ಗರಗ ಕೋಟೆಜಗದೀಶ್, ಹೊಸಹಳ್ಳಿ ಹೆಬ್ಬೂರಪ್ಪ, ಎಂ.ಬಿ. ನಾಗರಾಜ್ ಕಾಕನೂರು ಇದ್ದರು.