

ಗೋಕರ್ಣ: ಬಹುವಿಧ ವಿಸ್ತಾರವುಳ್ಳ ನಮ್ಮ ಸಂಸ್ಕೃತಿ, ನಮ್ಮ ಕಲೆ, ನಮ್ಮ ಪರಂಪರೆ ಒಟ್ಟಾರೆಯಾಗಿ ಸಮಗ್ರವಾದ ನಮ್ಮತನದ ಬಂಡಿಯ ಓಟ ಇವತ್ತು ಆತಂಕದ ಇಕ್ಕಟ್ಟಿನಲ್ಲಿದೆ. ಇಂತಹ ಕಠಿಣ ಸಂದಿಗ್ಧಮಯ ಸನ್ನಿವೇಶದಲ್ಲಿ ಪ್ರತಿ ಮನೆಯಲ್ಲೂ ನಮ್ಮತನ ಅನುರಣಿಸುವ ಪ್ರಯತ್ನ ವರ್ತಮಾನದ ಅಗತ್ಯವಾಗಿದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ನುಡಿದರು.
ಇಲ್ಲಿನ ಭದ್ರಕಾಳಿ ಕಾಲೇಜ್ ಸಭಾಂಗಣದಲ್ಲಿ ಆಯೋಜಿಸಿದ್ದ ವೈಶಾಲಿ ಗಾಯತ್ರಿ ಅವರ ಭರತ ನಾಟ್ಯ ರಂಗ ಪ್ರವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದ ತನ್ನ ಕಲೆಯ ಆವರಣವನ್ನು ಯಾವ ಪ್ರಕಾರದಲ್ಲಿ ವಿಸ್ತರಿಸಿಕೊಳ್ಳುತ್ತಾನೆ ಎನ್ನುವುದನ್ನು ಅನುಸರಿಸಿ ಆತನ ಯಶಸ್ಸು ನಿರ್ಧಾರವಾಗುತ್ತದೆ. ಆಂಗಿಕ, ವಾಚಿಕ, ಆಹಾರ್ಯವೇ ಮುಂತಾದ ಚತುರಂಗಗಳ ಪ್ರಾಧಾನ್ಯದ ಭರತ ನಾಟ್ಯ. ಯಕ್ಷಗಾನ ಮುಂತಾದ ಸಕಲ ಕಲೆಗಳಿಗೂ ಈ ಸೂತ್ರ ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ ಇಂಜಿನಿಯರ್ ಪದವಿಯ ಜತೆಗೆ ಭರತ ನಾಟ್ಯದಲ್ಲಿ ಕಠಿಣ ಅಭ್ಯಾಸ ನಡೆಸಿ ಈ ನಾಲ್ಕು ಅಂಗಗಳನ್ನು ಸಮರ್ಥವಾಗಿ ಪ್ರದರ್ಶಿಸುವ ನೈಪುಣ್ಯತೆ ಸಾಧಿಸಿದ ವೈಶಾಲಿ ಗಾಯತ್ರಿ ಈ ಕಲಾರಂಗದಲ್ಲಿ ಉತ್ತಮೋತ್ತಮ ಅವಕಾಶ ಪಡೆದು ಬೆಳಗಬಲ್ಲ ಎಲ್ಲ ಅರ್ಹತೆ ಪಡೆದವರಾಗಿದ್ದಾರೆ ಎಂದು ಶಿವಾನಂದ ಹಾರೈಸಿದರು.'
ಬೆಂಗಳೂರಿನ ನಾಟ್ಯಶ್ರೀ ಕೇಂದ್ರದ ನಿರ್ದೇಶಕಿ ಸುಮಾ ನಾಗೇಶ, ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ವಿದ್ವಾನ್ ಗಣಪಯ್ಯ ಹೊಳ್ಳ, ನಿವೃತ್ತ ಶಿಕ್ಷಕಿ ನಿರ್ಮಲಾ ಹೊಳ್ಳ, ವೈಶಾಲಿ ಅವರ ಪ್ರತಿಭಾ ಸಂಪನ್ನತೆಯ ಬಗ್ಗೆ ಮಾತನಾಡಿದರು. ಭರತ ನಾಟ್ಯ ಗುರು ಬೆಂಗಳೂರಿನ ಅಲೆಕ್ಸ್ ರೆಫೆಲ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ರಂಗ ಪ್ರವೇಶದಲ್ಲಿ ವೈಶಾಲಿ ಅವರು ವೈವಿಧ್ಯಮಯ ಏಳು ನಾಟ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕ ವೃಂದದ ಶ್ಲಾಘನೆಗೆ ಪಾತ್ರರಾದರು.