

ಯಲಬುರ್ಗಾ: ಪಟ್ಟಣದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ 2024-25ನೇ ಸಾಲಿನಲ್ಲಿ ಒಟ್ಟು 34.58 ಕೋಟಿ ರೂ. ಬಜೆಟ್ ಮಂಡಿಸಲಾಗಿದೆ. ಅದರಲ್ಲಿ 2.98 ಲಕ್ಷ ರೂ. ಉಳಿತಾಯದ ನಿರೀಕ್ಷೆ ಮಾಡಲಾಗಿದೆ ಎಂದು ಪಪಂ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ತಿಳಿಸಿದರು.
ಪಟ್ಟಣದ ಪಪಂ ಕಚೇರಿಯಲ್ಲಿ ಗುರುವಾರ ಬಜೆಟ್ ಮಂಡಿಸಿ ಮಾತನಾಡಿದರು. 34.58 ಕೋಟಿ ರೂ. ಬಜೆಟ್‌ನ ಪೈಕಿ 34.55 ಕೋಟಿ ರೂ. ಪಾವತಿಸಲಾಗುವುದು. ಜನತೆಯ ಅಭಿವೃದ್ಧಿಗಾಗಿ ಜನಪರ ಬಜೆಟ್ ಮಂಡನೆ ಮಾಡಲಾಗಿದೆ. ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ನಿರೀಕ್ಷಿತ ಅನುದಾನ: ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 2024-25ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯಲ್ಲಿ 70 ಲಕ್ಷ ರೂ., ಎಸ್‌ಎಫ್‌ಸಿ ಮುಕ್ತ ನಿಧಿಯಡಿ 20 ಲಕ್ಷ ರೂ., ಎಸ್‌ಎಫ್‌ಸಿ ಕುಡಿವ ನೀರಿಗೆ 10 ಲಕ್ಷ ರೂ., ವಿಶೇಷ ಯೋಜನೆಯಡಿ 25 ಕೋಟಿ ರೂ., ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ 70 ಲಕ್ಷ ರೂ., ಎಸ್‌ಎಫ್‌ಸಿ ವಿದ್ಯುತ್‌ಗೆ 85 ಲಕ್ಷ ರೂ., ಎಸ್‌ಎಫ್‌ಸಿ ವೇತನಕ್ಕಾಗಿ 98 ಲಕ್ಷ ರೂ. ಅನುದಾನ ನಿರೀಕ್ಷೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಮುಖ ಬೇಡಿಕೆಗಳು: 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆ 65 ಲಕ್ಷ ರೂ., ನೀರಿನ ತೆರಿಗೆ 16.45 ಲಕ್ಷ ರೂ., ಜಾಹೀರಾತು ತೆರಿಗೆ 20 ಸಾವಿರ ರೂ., ಉದ್ದಿಮೆ ತೆರಿಗೆ 2.80 ಲಕ್ಷ ರೂ., ಮಾರುಕಟ್ಟೆ ತೆರಿಗೆ 1.80 ಲಕ್ಷ ರೂ., ವಾಣಿಜ್ಯ ಮಳಿಗೆ 13 ಲಕ್ಷಗಳ ಕ್ರೊಢೀಕರಣ ಮಾಡಲು ಕ್ರಮ ವಹಿಸಲಾಗುವುದು ಎಂದು ಆಡಳಿತಾಧಿಕಾರಿ ಬಸವರಾಜ ತೆನ್ನಳ್ಳಿ ತಿಳಿಸಿದರು.
ಪುರಸಭೆಗೆ ಪ್ರಸ್ತಾವನೆ: ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಘೋಷಣೆ ಮಾಡುವುದಕ್ಕೆ ಸಭೆಯಲ್ಲಿ ಎಲ್ಲ ಸದಸ್ಯರ ಸರ್ವಾನುಮತದ ಒಪ್ಪಿಗೆ ದೊರೆತಿದೆ. ಜನಸಂಖ್ಯೆಗೆ ಅನುಗುಣವಾಗಿ ಪುರಸಭೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ನಾಗೇಶ ಸಭೆಯಲ್ಲಿ ಪ್ರಸ್ತಾಪಿಸಿದರು.
ಪ್ರಸಕ್ತ ಸಾಲಿನಲ್ಲಿ ಪಟ್ಟಣ 18 ಸಾವಿರ ಜನಸಂಖ್ಯೆ ಹೊಂದಿದೆ. ಇನ್ನು ಎರಡು ಸಾವಿರ ಜನಸಂಖ್ಯೆ ಸರಿದೂಗಿಸಲು ಪಟ್ಟಣದಿಂದ 8 ಕಿಮೀ ವ್ಯಾಪ್ತಿಗೆ ಬರುವ ಗ್ರಾಮಗಳಾದ ಕುದ್ರಿಕೊಟಗಿ, ಮಾರನಾಳ, ಮಲಕಸಮುದ್ರ ಹಾಗೂ ಹೊಸಳ್ಳಿಯನ್ನು ಪುರಸಭೆಗೆ ಸೇರ್ಪಡೆ ಮಾಡಿಕೊಳ್ಳುವ ವಿಚಾರ ಇದೆ. ಪುರಸಭೆ ರಚನೆಯಾಗುವುದರಿಂದ ಸಾರ್ವಜನಿಕರಿಗೆ ಅಗತ್ಯ ಸೇವೆ ದೊರೆಯಲಿದೆ ಎಂದು ತಿಳಿಸಿದರು.
ಪಪಂ ಸದಸ್ಯರಾದ ಅಮರೇಶ ಹುಬ್ಬಳ್ಳಿ, ಡಾ.ನಂದಿತಾ ದಾನರಡ್ಡಿ, ವಸಂತ ಭಾವಿಮನಿ, ಬಸಮ್ಮ ಬಣಕಾರ, ಶ್ರೀದೇವಿ ಗುರುವಿನ್, ರೇವಣಪ್ಪ ಹೀರೆಕುರುಬರ್, ಬಸಲಿಂಗಪ್ಪ ಕೊತ್ತಲ್, ಅಶೋಕ ಅರಕೇರಿ, ಕಳಕಪ್ಪ ತಳವಾರ್, ರಿಯಾಜ್‌ಖಾಜಿ, ಹನುಮಂತಪ್ಪ ಭಜಂತ್ರಿ ಹಾಗೂ ಸಿಬ್ಬಂದಿ ಇದ್ದರು.