ಕಾರ್ಯಕರ್ತರೇ ಮುಂದಿನ ನಾಯಕರು

MP
ಕೊಪ್ಪಳ ತಾಲೂಕಿನ ಓಜನಹಳ್ಳಿಯಲ್ಲಿ ಮೆಕ್ಕೆಜೋಳ ತೆನೆಯಲ್ಲಿ ನಿರ್ಮಿಸಿದ ಶ್ರೀರಾಮಮಂದಿರಕ್ಕೆ ಸಂಸದ ಸಂಗಣ್ಣ ಕರಡಿ ಸೋಮವಾರ ಭೇಟಿ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಪಕ್ಷದ ಮುಖಂಡರಾದ ಅಮರೇಶ್ ಕರಡಿ, ಬಸವರಾಜ ಈಶ್ವರಗೌಡರ, ದೇವಪ್ಪ ಕುಟಗನಹಳ್ಳಿ, ಬಸವರಾಜ ಇಂದರಗಿ ಇದ್ದರು.
Published on

ಕೊಪ್ಪಳ: ಬಿಜೆಪಿ ಯುವಕರಿಗೆ ಮನ್ನಣೆ ನೀಡುವ ಏಕೈಕ ಪಕ್ಷವಾಗಿದ್ದು, ಕಾರ್ಯಕರ್ತರೇ ಪಕ್ಷದ ನಾಯಕರು ಎಂಬುದು ಜಿಲ್ಲಾಧ್ಯಕ್ಷರಾಗಿ ನವೀನ್ ಗುಳಗಣ್ಣನವರ್ ನೇಮಕವಾಗಿರುವುದರಲ್ಲಿ ಸಾಬೀತಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ತಾಲೂಕಿನ ಓಜನಹಳ್ಳಿಯಲ್ಲಿ ಮೆಕ್ಕೆಜೋಳ ತೆನೆಯಲ್ಲಿ ನಿರ್ಮಿಸಿದ ಶ್ರೀರಾಮಮಂದಿರ ವೀಕ್ಷಿಸಿ ಸೋಮವಾರ ಮಾತನಾಡಿದರು. ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷ ಸಂಘಟಿಸಿದ್ದು, ನಂತರ ಪದಾಧಿಕಾರಿ ಸ್ಥಾನ ದೊರೆಯಿತು. ಇದೀಗ ಅಧ್ಯಕ್ಷ ಸ್ಥಾನ ದೊರೆತಿದೆ. ಬಿಜೆಪಿ ಕಾರ್ಯಕರ್ತರು ಮುಂದೊಂದು ದಿನ ನಾಯಕರಾಗುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು.

ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಎರಡು ದಶಕದಿಂದ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿದ್ದರ ಫಲ ಉನ್ನತ ಸ್ಥಾನ ನೀಡಿ ಪಕ್ಷ ಗೌರವಿಸಿದೆ. ಜಿಲ್ಲೆಯ ಎಲ್ಲ ಹಿರಿಯ ನಾಯಕರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿಗೆ ಕಾರಣೀಕರ್ತರಾಗಬೇಕು ಎಂದರು.

ಚುನಾವಣೆ ವೇಳೆ ಕಾರ್ಯಕರ್ತರನ್ನು ಬಳಸಿಕೊಂಡು ಗೆದ್ದ ಬಳಿಕ ಅವರನ್ನು ಕೈ ಬಿಡುವ ಚಾಳಿ ಕಾಂಗ್ರೆಸ್ ರೂಢಿಸಿಕೊಂಡಿದೆ. ಕಾರ್ಯಕರ್ತರಿಗೆ ಉನ್ನತ ಹುದ್ದೆ, ನಿಗಮ, ಮಂಡಳಿ ನೀಡದೇ ಶಾಸಕರಿಗೆ ಪ್ರಾಶಸ್ತ್ಯ ನೀಡಲು ಮುಂದಾಗಿದೆ. ಆದರೆ, ಬಿಜೆಪಿ ಹಾಗಲ್ಲ. ಕಾರ್ಯಕರ್ತರೇ ಜೀವಾಳ. ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಉನ್ನತ ಹುದ್ದೆ ನೀಡಿ ಗೌರವಿಸಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತಿದೆ ಎಂದರು.

ಬಿಜೆಪಿ ಮುಖಂಡರಾದ ಅಮರೇಶ್ ಕರಡಿ, ಬಸವರಾಜ ಈಶ್ವರಗೌಡರ, ದೇವಪ್ಪ ಕುಟಗನಹಳ್ಳಿ, ಬಸವರಾಜ ಇಂದರಗಿ, ಸೈಯದ್ ನಾಸೀರ್‌ಹುಸೇನ್, ಮೈಬುಬ್ ಕುದರಿಮೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net