ಸ್ಟೇಟ್‌ಬ್ಯಾಂಕ್‌ ಸಿಟಿ ಬಸ್ ಧಾವಂತಕ್ಕೆ ಪಾದಚಾರಿ ಮೃತ್ಯು

accident-15
Published on

ಮಂಗಳೂರು: ಸ್ಟೇಟ್‌ಬ್ಯಾಂಕ್‌ನ ರಾವ್ ಎಂಡ್ ರಾವ್ ಸರ್ಕಲ್‌ನಲ್ಲಿ ಸೋಮವಾರ ಸಿಟಿ ಬಸ್‌ನ ಧಾವಂತಕ್ಕೆ ಪಾದಚಾರಿಯೊಬ್ಬರು ಬಸ್ಸಿನಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಸ್ಟೇಟ್‌ಬ್ಯಾಂಕ್ ವೃತ್ತದಿಂದ ಕೊಣಾಜೆ ಬಳಿಯ ಹೂಹಾಕುವ ಕಲ್ಲು ಎಂಬಲ್ಲಿಗೆ ತೆರಳುತ್ತಿದ್ದ ಬಸ್ ರಾವ್ ಎಂಡ್ ರಾವ್ ಸರ್ಕಲ್ ಬಳಿ ತಿರುವು ಪಡೆಯುತ್ತಿದ್ದಂತೆ ವ್ಯಕ್ತಿಯೊಬ್ಬರು ಅಡ್ಡ ಬಂದಿದ್ದು, ನೇರವಾಗಿ ಬಸ್ಸಿನ ಎದುರಿನ ಚಕ್ರದಡಿಗೆ ಸಿಲುಕಿ ಮೃತಪಟ್ಟಿದ್ದಾರೆ.


ವ್ಯಕ್ತಿಯ ತಲೆ ಪೂರ್ಣ ಛಿದ್ರಗೊಂಡಿದ್ದು, ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಖ ಛಿದ್ರಗೊಂಡ ಕಾರಣ ವ್ಯಕ್ತಿಯ ಮುಖ ಪರಿಚಯ ಇಲ್ಲದೆ ಮೃತರ ಪತ್ತೆ ಸಾಧ್ಯವಾಗಿಲ್ಲ. ಖಾಸಗಿ ಬಸ್ ಚಾಲಕನ ನಿರ್ಲಕ್ಷೃದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಮೃತ ವ್ಯಕ್ತಿ ಸುಮಾರು 40-42 ವರ್ಷ ವಯಸ್ಸಿನವರಾಗಿದ್ದಾರೆ. ಅಪರಿಚಿತನ ಪತ್ತೆಗಾಗಿ ಸಂಶಯ ಇದ್ದವರು ಪಾಂಡೇಶ್ವರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು. ಶವವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net