ಮಕ್ಕಳ ಹಿತಕ್ಕಾಗಿ ಕರ್ತವ್ಯ ನಿರ್ವಹಣೆಯಲ್ಲಿನ ಸಾಧನೆಗೆ ಖುಷಿ ಸಹ ಆಗುತ್ತದೆ.

Untitled-1 copy
Published on

ಶಾಲೆಗಳಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ಜತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ವಿಶೇಷ ಯೋಜನೆಗಳನ್ನು ರೂಪಿಸಿಕೊಂಡು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿದಾಗ ಯಶಸ್ಸು, ಒಳ್ಳೆಯ ಹೆಸರು ಲಭಿಸುತ್ತದೆ. ಇದರಿಂದ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. ಇದಕ್ಕಿಂತಲೂ ಮಕ್ಕಳ ಹಿತಕ್ಕಾಗಿ ಕರ್ತವ್ಯ ನಿರ್ವಹಣೆಯಲ್ಲಿನ ಸಾಧನೆಗೆ ಖುಷಿ ಸಹ ಆಗುತ್ತದೆ.

ಇದು ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಚಿಂತಾಮಣಿ ತಾಲೂಕಿನ ಕೈವಾರ ಕ್ಲಸ್ಟರ್‌ನ ಮಾರಪಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕ ಮಂಜುನಾಥ್ ಅಭಿಪ್ರಾಯ. ಶಾಲೆಯ ಕಾಂಪೌಂಡ್ ಮತ್ತು ಗೋಡೆಗಳಿಗೆ ಬಣ್ಣ ಬಣ್ಣ ವರ್ಲಿ ಚಿತ್ರದ ಮೆರಗು, ಆವರಣದಲ್ಲಿ ವಿವಿಧ ಔಷÀಧÀ ಗಿಡಗಳು, ಹಣ್ಣಿನ ಗಿಡಗಳನ್ನೊಳಗೊಂಡ ಉದ್ಯಾನದ ಮೂಲಕ ಹಸಿರಿನ ವಾತಾವರಣ ನಿರ್ಮಾಣ, ಗುಣಮಟ್ಟದ ಶಿಕ್ಷಣದ ಮೂಲಕ ಮಕ್ಕಳ ದಾಖಲಾತಿ ಹೆಚ್ಚಳ, ದಾನಿಗಳ ನೆರವಿನಲ್ಲಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಸಮಗ್ರ ಪ್ರಗತಿಪರ ಕೆಲಸಗಳಿಗೆ ಪ್ರಶಸ್ತಿಗಳು ಒಲಿದಿವೆ.

ಶಾಲೆಯ ಅಭಿವೃದ್ಧಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದಕ್ಕೆ ಮೊದಲೇ ತೃಪ್ತಿ ಇತ್ತು. ಇದನ್ನು ಈಗ ಪ್ರಶಸ್ತಿಯು ಮತ್ತಷ್ಟು ಹೆಚ್ಚಿಸಿದೆ. ಅಭಿನಂದನೆಗಳ ಮಹಾಪೂರಕ್ಕೆ ಖುಷಿಯಾಗುತ್ತಿದೆ. ಶಿಕ್ಷಣ ಇಲಾಖೆಯು ಸಾಮಾನ್ಯವಾಗಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆ ವೇಳಾಪಟ್ಟಿಯನ್ನು ನೀಡುತ್ತಿದೆ. ಇದನ್ನು ಅನುಷ್ಠಾನಗೊಳಿಸುವುದರ ಜತೆಗೆ ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಕ್ರಿಯಾಶೀಲ ಕೆಲಸಗಳ ವಿಶೇಷ ಯೋಜನೆ ರೂಪಿಸಿಕೊಳ್ಳಬೇಕು. ಇದನ್ನು ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ತರಬೇಕು. ಇತ್ತೀಚೆಗೆ ಕೆಲ ನಕಾರಾತ್ಮಕ ಬೆಳವಣಿಗೆಗಳಿಂದ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಇದರ ನಡುವೆ ಮಕ್ಕಳಿಗೆ ಸರಿಯಾದ ದಾರಿಯಲ್ಲಿ ಮುನ್ನಡೆಯುವ ಶಕ್ತಿ ತುಂಬುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರು ಮೊದಲು ಮಾದರಿಯಾಗಿರಬೇಕು. ನಮ್ಮನ್ನು ನೋಡಿ ಮಕ್ಕಳು ಕಲಿಯುತ್ತಾರೆ ಎಂಬ ಅರಿವು ಇರಬೇಕು. ಗುರುವಿಗೆ ಒಳ್ಳೆಯ ಸ್ಥಾನಮಾನ ಇದೆ. ಇದಕ್ಕೆ ಧಕ್ಕೆ ತರಬಾರದು ಎಂದು ಪ್ರಶಸ್ತಿ ವಿಜೇತ ಶಿಕ್ಷಕ ಮಂಜುನಾಥ್ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net