

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಮನೋರಮಾ ಕಾಲೇಜಿನಲ್ಲಿ ಮಂಗಳವಾರ ರಾಜ್ಯ ಬರಹಗಾರರ ವತಿಯಿಂದ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರ್. ಎಸ್. ಬುರಡಿ, ಶಾಲಾ ಮಕ್ಕಳ ಜೊತೆ ಮಾತನಾಡುವುದು ಸುಲಭ. ಆದರೆ ಸಾಹಿತಿಗಳು, ಬುದ್ದೀಜಿವಿಗಳ ಜತೆ ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕನ್ನಡ ಕಲಿಸಿ ಕನ್ನಡ ಉಳಿಸುವುದು ಎಲ್ಲರ ಜವಾಬ್ದಾರಿ ಆಗಿದೆ ಎಂದರು.
ಮನೋರಮಾ ಕಾಲೇಜು ಪ್ರಾಚಾರ್ಯ ಬಿ. ಎಸ್. ಹಿರೇಮಠ ಮಾತನಾಡಿ, ಕರ್ನಾಟಕ ಏಕೀಕರಣವನ್ನು ಪ್ರಬಲವಾಗಿ ಪ್ರತಿಪಾದಿಸಿದವರಲ್ಲಿ ಆಲೂರ ವೆಂಕಟರಾಯರು, ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ, ಡಾ. ಎಚ್. ಎನ್. ಹೂಗಾರ, ಸಂಶಿ ಭೂಸನೂರಮಠ, ಡಾ. ಆರ್. ಸಿ. ಹಿರೇಮಠ, ಚನ್ನವಿರ ಕಣವಿ ಸೇರಿದಂತೆ ಸಾಕಷ್ಟು ಜನ ಕವಿಗಳು, ಕನ್ನಡ ಅಭಿಮಾನಿಗಳು ತ್ಯಾಗದ ಲದಿಂದ ಕರ್ನಾಟಕ ಎಂಬ ಹೆಸರು ಬಂದಿದೆ ಎಂದರು.
ದೊರೆಸ್ವಾಮಿಮಠ ಭೈರನಟ್ಟಿ ಶಾಂತಲಿಂಗ ಶ್ರೀಗಳು ಮಾತನಾಡಿ, ಎಲ್ಲರೂ ಕನ್ನಡ ಉಳಿಸಿ ಬೆಳಸಲು ಶ್ರಮವಹಿಸಬೇಕು. ಬರಹಗಾರರ ಸಂಟನೆಯು ಕವಿಗೋಷ್ಠಿ ಹಮ್ಮಿಕೊಂಡಿರುವುದು ಸಂತಸದ ವಿಚಾರ. ಎಲ್ಲಾ ಕವಿಗಳು, ಸಾಹಿತಿಗಳು ಬರೆಯುವ ಕವನಗಳು ಸಾಮಾಜಿಕ ಸಾಮರಸ್ಯ, ಸಾಮಾಜಿಕ ಜನರ ಬದುಕು ಹಸನ ಮಾಡುವಂತ ಕವಿತೆ ಆಗಿರಲಿ ಎಂದರು. ಕಾರ್ಯಕ್ರಮದಲ್ಲಿ ಬರಹಗಾರರನ್ನು ಸನ್ಮಾನಿಸಲಾಯಿತು.
ಡಾ. ಕಲಾಶ್ರೀ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಎನ್. ಎಂ. ಕುಡತರಕರ, ಕಿಶೋರ ಮುದಗಲ್ಲ, ಪ್ರೊ. ಶರಣು ಪೂಜಾರ, ಕೆ. ಎ. ಬಳಿಗಾರ, ಬಸವರಾಜ ಕ್ಯಾರಕೊಪ್ಪ, ಈಶ್ವರ ಕುರಿ ಹಲವರು ಇದ್ದರು.