

ನೆಲಮಂಗಲ: ಲಾಕ್‌ಡೌನ್‌ನಿಂದ ಎಲ್ಲರೂ ರಜೆ ಪಡೆದು ಮನೆಯಲ್ಲಿದ್ದರೆ, ಕರೊನಾ ಭೀತಿ ನಡುವೆಯೂ ಕೆಲಸ ಮಾಡಿರುವ ಪೌರಕಾರ್ಮಿಕರು, ಬೆಸ್ಕಾಂ ನೌಕರರಿಂದ ರಾಜ್ಯ ಸುಭಿಕ್ಷವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ಪಟ್ಟಣದ ಪವಾಡ ಶ್ರೀ ಬಸವಣ್ಣ ದೇವರಮಠದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಪೌರಕಾರ್ಮಿಕರು ಹಾಗೂ ಬೆಸ್ಕಾಂ ನೌಕರರ ಅಧಿಕಾರಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಕಾರ್ಯಕ್ರಮಗಳಲ್ಲಿ ಜನನಾಯಕರಿಗೆ ಹಾರಹಾಕಿ ಅಭಿನಂದಿಸುವುದು ಸಾಮಾನ್ಯ. ಆದರೆ ಕಾರ್ಮಿಕ ದಿನಾಚರಣೆ ಹೆಸರಿನಲ್ಲಿ ಪೌರಕಾರ್ಮಿಕರು, ಬೆಸ್ಕಾಂ ನೌಕರರಿಗೆ ಮಾಲಾರ್ಪಣೆ ಮಾಡಿ ಸನ್ಮಾನಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ದಾನಿಗಳ ಸಹಕಾರ ಪಡೆದು ಮಠ 30 ದಿನಗಳಿಂದಲೂ ಬಡವರು, ಕೂಲಿಕಾರ್ಮಿಕರು, ನಿರಾಶ್ರಿತರಿಗೂ ಆಹಾರ ಪೂರೈಸುತ್ತಿರುವ ಮಠಕ್ಕೂ ರಜೆಯಿಲ್ಲದಂತಾಗಿದೆ. ಕುಸಿದಿರುವ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದೆಂದು ಭಾವಿಸಿರುವ ದೇಶದ ಪ್ರಧಾನಿ ಜನರನ್ನು ಸಾವಿನ ದವಡೆಯಿಂದ ತಪ್ಪಿಸುವ ಉದ್ದೇಶದಿಂದ ದೀರ್ಘಾವಧಿ ಲಾಕ್‌ಡೌನ್ ಮಾಡಿದ್ದು ಪ್ರತಿಯೊಬ್ಬರೂ ಸಹಕಾರ ನೀಡಬೇಕಿದೆ ಎಂದರು.
ಮಠದಲ್ಲಿ ಸರಳವಾಗಿ ಆಚರಿಸಿದ ಬಸವ ಜಯಂತಿಯಲ್ಲಿ ಪೊಲೀಸ್, ಆರೋಗ್ಯ ಇಲಾಖೆ ಜತೆಗೆೆ ಆಶಾಕಾರ್ಯಕರ್ತೆಯರನ್ನು ಅಭಿನಂದಿಸಿ ಗೌರವಿಸಿಲಾಗಿದ್ದು, ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ಪೌರಕಾರ್ಮಿಕರು, ವಿದ್ಯುತ್ ಇಲಾಖೆ ನೌಕಕರ ಸೇವೆ ಗುರುತಿಸಿ ಗೌರವಿಸುವ ಮೂಲಕ ಕಾರ್ಮಿಕರ ದಿನವನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರಸಭೆ ವ್ಯಾಪ್ತಿಯ 130ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಮಠದಿಂದ ಆಹಾರ ಸಾಮಗ್ರಿ ಮತ್ತು ತರಕಾರಿ ಕಿಟ್, 80ಕ್ಕೂ ಹೆಚ್ಚು ಬೆಸ್ಕಾಂ ನೌಕರರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಲಾಯಿತು.
ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮೀಜಿ, ಕಂಚುಗಲ್ ಬಂಡೇಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ, ಸದಸ್ಯ ಎಂ.ರಮೇಶ್, ತಾಲೂಕು ಅ.ಭಾ.ವೀ.ಮಹಾಸಭಾ ಅಧ್ಯಕ್ಷ ಎನ್.ಎಸ್.ಶಾಂತಕುಮಾರ್, ನಿರ್ದೇಶಕ ರೇವಣಸಿದ್ದಯ್ಯ, ನಗರಸಭೆ ಸದಸ್ಯೆ ಎನ್.ಎಸ್.ಪೂರ್ಣಿಮಾ, ರೋಟರಿ ಮಾಜಿ ಅಧ್ಯಕ್ಷ ಎಂ.ಎನ್.ಹರೀಶ್‌ಕುಮಾರ್, ಮುಖಂಡರಾದ ಎಚ್.ಜೆ.ಸತೀಶ್‌ಕುಮಾರ್, ಕೇಬಲ್‌ಸುರೇಶ್, ಮೃತ್ಯುಂಜಯ, ಕೆ.ಪಿ.ಬೃಂಗೀಶ್, ಕೆ.ಪಿ.ಆನಂದ್, ಎನ್.ರಾಜಮ್ಮ, ಸ್ವಯಂ ಸೇವಕ ಬಿ.ರುದ್ರಸ್ವಾಮಿ, ಎನ್.ಪುನೀತ್‌ರಾಜ್ ಮತ್ತಿತರರಿದ್ದರು.