ಉಡುಪಿ ಜಿಲ್ಲಾ ರೆಡ್​ಕ್ರಾಸ್​ ಚಟುವಟಿಕೆ ರಾಜ್ಯಕ್ಕೆ ಮಾದರಿ...

Red Cross 1
Published on

ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್​ ಶ್ಲಾಘನೆ

ಫಲಾನುಭವಿಗಳಿಗೆ ಶ್ರವಣ ಸಾಧನ ವಿತರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಅಂತಾರಾಷ್ಟ್ರೀಯ ಸಂಸ್ಥೆಯಾಗಿರುವ ರೆಡ್​ ಕ್ರಾಸ್​ ಸಂಘಟನೆಯು ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ಅದರಲ್ಲೂ ಉಡುಪಿ ಜಿಲ್ಲಾ ರೆಡ್​ಕ್ರಾಸ್​ ಘಟಕವು ಉತ್ತಮ ಚಟುವಟಿಕೆ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದು, ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ರೆಡ್​ಕ್ರಾಸ್​ ಉಪಾಧ್ಯಕ್ಷ, ನಿವೃತ್ತ ಐಪಿಎಸ್​ ಅಧಿಕಾರಿ ಭಾಸ್ಕರ ರಾವ್​ ಶ್ಲಾಘಿಸಿದರು.

ಉಡುಪಿ ಜಿಲ್ಲಾ ರೆಡ್​ ಕ್ರಾಸ್​ ಭವನದಲ್ಲಿ ಜುಲೈ 25ರಂದು ಆಯೋಜಿಸಿದ್ದ ಜಿಲ್ಲಾ ರೆಡ್​ ಕ್ರಾಸ್​ನ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ರಾಜ್ಯ ಘಟಕದಿಂದ ಎಲ್ಲ ರೀತಿಯ ಸಹಕಾರ ಜಿಲ್ಲಾ ಘಟಕಕ್ಕೆ ನೀಡಲಾಗುವುದು. ಉಡುಪಿ ಜಿಲ್ಲಾ ಘಟಕ ಮತ್ತು ರಾಜ್ಯ ಘಟಕದ ಸಭಾಪತಿಗಳಾದ ಬಸ್ರೂರು ರಾಜೀವ ಶೆಟ್ಟಿ ಅವರ ಕೊಡುಗೆ ಅಪಾರವಾಗಿದೆ. ರೆಡ್​ಕ್ರಾಸ್​ ಘಟಕದಿಂದ ಅನುಷ್ಠಾನಗೊಳ್ಳುತ್ತಿರುವ ವಿಕಲಚೇತನರ ಪುನರ್ವಸತಿ ಕೇಂದ್ರದ ಚಟುವಟಿಕೆಯೂ ಉತ್ತಮವಾಗಿದೆ ಎಂದು ಭಾಸ್ಕರ ರಾವ್​ ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ವಿಷಯ ಚರ್ಚೆ

Red Cross 2
ಶಾಲಾ-ಕಾಲೇಜುಗಳಲ್ಲಿ ಜೂನಿಯರ್​ ರೆಡ್​ ಕ್ರಾಸ್​ ಮತ್ತು ಯುವ ರೆಡ್​ ಕ್ರಾಸ್​ ಘಟಕ ಬಲಪಡಿಸುವುದು, ಪರಿಣಾಮಕಾರಿಯಾಗಿ ಪ್ರಥಮ ಚಿಕಿತ್ಸಾ ತರಬೇತಿ ಅನುಷ್ಠಾನಗೊಳಿಸುವುದು, ಪ್ರಕೃತಿ ವಿಕೋಪದ ಕುರಿತಾಗಿ ಅರಿವು ಮೂಡಿಸುವುದು, ಸದಸ್ಯತ್ವ ಅಭಿಯಾನ ಉತ್ತೇಜಿಸುವುದು ಇತ್ಯಾದಿ ವಿಷಯ ಕುರಿತಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಶ್ರವಣ ದೋಷವುಳ್ಳ ಅನೇಕ ಫಲಾನುಭವಿಗಳಿಗೆ ಶ್ರವಣ ಸಾಧನ ವಿತರಿಸಲಾಯಿತು. ಜಿಲ್ಲಾ ಘಟಕದ ಉಪಸಭಾಪತಿ ಡಾ. ಅಶೋಕಕುಮಾರ್​ ವೈ.ಜಿ. ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರು ನಗರ ರೆಡ್​ಕ್ರಾಸ್​ ಜಿಲ್ಲಾ ಸಭಾಪತಿ ಬಾಲಕೃಷ್ಣ ಶೆಟ್ಟಿ, ರಾಜ್ಯ ರೆಡ್​ಕ್ರಾಸ್​ ಉಪ ಕಾರ್ಯದರ್ಶಿ ಉಮಾಕಾಂತ, ರಾಜ್ಯ ರೆಡ್​ಕ್ರಾಸ್​ ಆಡಳಿತ ಮಂಡಳಿ ಸದಸ್ಯ ನಾಗೇಶ ಬೆಂಗಳೂರು, ಜಿಲ್ಲಾ ರೆಡ್​ಕ್ರಾಸ್​ ಆಡಳಿತ ಮಂಡಳಿ ಸದಸ್ಯ ಅಶ್ವತ್ಥನಾರಾಯಣ ಕುಂದಾಪುರ, ರೆಡ್​ ಕ್ರಾಸ್​ ಸಭಾಪತಿ ಜಯಕರ ಶೆಟ್ಟಿ, ಖಚಾಂಚಿ ಶಿವರಾಮ ಶೆಟ್ಟಿ, ಜಿಲ್ಲಾ ರೆಡ್​ ಕ್ರಾಸ್​ ಘಟಕದ ಖಚಾಂಚಿ ರಮಾದೇವಿ, ಆಡಳಿತ ಮಂಡಳಿ ಸದಸ್ಯ ಚಂದ್ರಶೇಖರ, ಮಾಜಿ ಕಾರ್ಯದರ್ಶಿಗಳಾದ ಬಾಲಕೃಷ್ಣ ಶೆಟ್ಟಿ, ರತ್ನಾಕರ ಶೆಟ್ಟಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಯೋಜನಾ ನಿರ್ದೇಶಕ ಶಿವಾಜಿ, ಡಿಡಿಆರ್​ಸಿ ನೋಡಲ್​ ಅಧಿಕಾರಿ ಜಯಶ್ರೀ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ, ರೆಡ್​ಕ್ರಾಸ್​ನ ಕಾರ್ಯ ಚಟುವಟಿಕೆಗಳ ವಿವರ ನೀಡಿದರು. ಜಿಲ್ಲಾ ರೆಡ್​ ಕ್ರಾಸ್​ ಆಡಳಿತ ಮಂಡಳಿ ಸದಸ್ಯ ವಿ.ಜಿ. ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net