

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಮತೋಲನ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರ ಚಿಂತನೆಗಳೇ ಬದಲಾಗುತ್ತಿವೆ. ಅವರಲ್ಲಿ ಅಹಂಕಾರ ಮನೆಮಾಡಿದೆ. ನಾನೊಬ್ಬನೆ, ನನ್ನದೇ ಸರ್ಕಾರ ಎಂಬ ದರ್ಪದಲ್ಲಿದ್ದಾರೆ. ಜಿಲ್ಲಾಧಿಕಾರಿಗೆ ಬೈಯುತ್ತಾರೆ. ಪೊಲೀಸ್ ಅಧಿಕಾರಿಗಳ ಮೇಲೆಯೇ ಕೈ ಮಾಡಲು ಹೋಗುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಯಾವ ದೇಶದಲ್ಲಿದ್ದಾರೆ? ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಇವರಿಗೆ ಅರಿವಿದೆಯೇ? ಪೊಲೀಸರ ಮೇಲೆ ಕೈ ಮಾಡಲು ಮುಂದಾದರೆ ಪೊಲೀಸರ ಆತ್ಮವಿಶ್ವಾಸ ಕುಸಿಯುವುದಿಲ್ಲವೇ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಷ್ಟ್ರದ ವಿಚಾರಕ್ಕೆ ಬಂದರೆ ಸಿದ್ದರಾಮಯ್ಯ ಪಾಕ್‌ನೊಂದಿಗೆ ಯುದ್ಧ ಬೇಡ ಎನ್ನುತ್ತಾರೆ. ಕೇಂದ್ರ ಸರ್ಕಾರದ್ದು ಭದ್ರತಾ ವೈಫಲ್ಯ ಎನ್ನುತ್ತಾರೆ. ಇಂದಿರಾಗಾಂಧಿ, ರಾಜೀವ್ ಗಾಂಧಿ ಹತ್ಯೆಯಾದಾಗ, ಪಾರ್ಲಿಮೆಂಟ್ ಮೇಲೆ ದಾಳಿಯಾದಾಗ ಭದ್ರತಾ ವೈಫಲ್ಯವಾಗಿತ್ತು ಎಂದು ಸಿದ್ದರಾಮಯ್ಯ ಅನುಭವಕ್ಕೆ ಬರಲಿಲ್ಲವೇ? ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅಧಿಕಾರಾವಧಿ ಮುಗಿಯುತ್ತಾ ಬಂದಿದೆ. ಅವರು ತಮ್ಮ ಸ್ಥಾನವನ್ನು ಯಾವಾಗ ಬೇಕಾದರೂ ಕಳೆದುಕೊಳ್ಳಬಹುದು. ಜತೆಗೆ ರಾಜ್ಯದ ಖಜಾನೆಯೂ ಖಾಲಿಯಾಗಿದೆ. ಪೊಲೀಸ್ ವ್ಯವಸ್ಥೆಯೂ ಹಾಳಾಗಿದೆ. ರಾಜ್ಯ ಜನತೆ ಸಿದ್ದರಾಮಯ್ಯ ಅವರ ಅಸಂಬದ್ಧ ಮಾತುಗಳಿಂದ ಬೇಸತ್ತು ಹೋಗಿದ್ದಾರೆ ಎಂದು ಟೀಕಿಸಿದರು.