ರಾಜ್ಯದ ‘ಶಕ್ತಿ’ಗೆ ಆಂಧ್ರ ಸಾರಿಗೆ ನಿಶ್ಯಕ್ತಿ !: ಪಕ್ಕದ ಸ್ಟೇಟ್‌ಗಳ ಮೇಲೆ ಪರಿಣಾಮ

bly bus
ಬಳ್ಳಾರಿ ಕೇಂದ್ರ ಬಸ್‌ನಿಲ್ದಾಣದಲ್ಲಿ ಆಂಧ್ರ ಬಸ್‌ನಲ್ಲಿ ಪ್ರಯಾಣಿಕರಿಲ್ಲದೆ ಖಾಲಿಯಾಗಿರುವುದು.
Published on

ಬಳ್ಳಾರಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಪೈಕಿ ಪ್ರಮುಖವಾದ ‘ಶಕ್ತಿ ಯೋಜನೆ’ಗೆ ರಾಜ್ಯಾದ್ಯಂತ ಭರಪೂರ ಸ್ಪಂದನೆ ದೊರೆತಿದೆ. ಮಹಿಳೆಯರಿಗಾಗಿ ಜಾರಿಯಾಗಿರುವ ಬಸ್‌ನಲ್ಲಿ ಉಚಿತ ಪ್ರಯಾಣ ನೆರೆಯ ಆಂಧ್ರಪ್ರದೇಶದ ಸಾರಿಗೆಗೂ ಬಿಸಿ ತಟ್ಟಿದೆ.

ಬಳ್ಳಾರಿಗೆ ಬರುವ ಆಂಧ್ರದ ಬಸ್‌ಗಳು ಖಾಲಿಖಾಲಿ ಹೊರಟಿವೆ.

ಆಂಧ್ರ-ಕರ್ನಾಟಕ ಗಡಿ ಜಿಲ್ಲೆ ಬಳ್ಳಾರಿಗೆ ಹೆಚ್ಚಾಗಿ ಆಂಧ್ರ ಸಾರಿಗೆ ಬಸ್‌ಗಳು ಬರುತ್ತವೆ. ಇವುಗಳಲ್ಲಿ ಆಂಧ್ರಕ್ಕೆ ಹೋಗುವ ಮಾರ್ಗದಲ್ಲಿ ಬರುವ ಕರ್ನಾಟಕ ಭಾಗದ ಜನರು ಪ್ರಯಾಣಿಸುತ್ತಾರೆ. ಆದರೆ, ಕರ್ನಾಟಕ ಸರ್ಕಾರ ಹೆಣ್ಣು ಮಕ್ಕಳಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಶಕ್ತಿ ಯೋಜನೆಗೆ ಜೂ.11ರಂದು ಚಾಲನೆ ನೀಡಿದ್ದು, ಹೀಗಾಗಿ ಆಂಧ್ರಕ್ಕೆ ತೆರಳುವವರು ಕೆಕೆಆರ್‌ಟಿಸಿ ಬಸ್‌ನಲ್ಲಿ ರಾಜ್ಯದ ಗಡಿವರೆಗೆ ಪ್ರಯಾಣಿಸುತ್ತಿದ್ದಾರೆ. ಆಂಧ್ರ ಗಡಿ ಆರಂಭದಿಂದ ಅದೇ ಬಸ್‌ಗಳಲ್ಲಿ ದುಡ್ಡು ನೀಡಿ ಅಥವಾ ಆಂಧ್ರ ಬಸ್‌ಗಳ ಮೂಲಕ ಪಯಣ ಮಾಡುತ್ತಿದ್ದಾರೆ. ಎಕ್ಸ್‌ಪ್ರೆಸ್ (ಅಂತಾರಾಜ್ಯ ಬಸ್‌ಗಳು) ಹೊರತುಪಡಿಸಿ, ಆರ್ಡಿನರಿ ಬಸ್‌ಗಳಲ್ಲಿ ಈ ಸೌಲಭ್ಯವಿದೆ. ಇದರಿಂದಾಗಿ ಬಳ್ಳಾರಿಗೆ ಬರುವ ಆಂಧ್ರದ ಬಸ್‌ಗಳು ಖಾಲಿಖಾಲಿ ಹೊರಟಿವೆ.

ಮೂರು ದಿನಗಳಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

ಆಂಧ್ರ ಬಸ್‌ಗಳಲ್ಲಿ ಕಳೆದ ಮೂರು ದಿನಗಳಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದ್ದರಿಂದ ಖಾಲಿಯಾಗಿ ಓಡಾಡುತ್ತಿವೆ. ಕರ್ನೂಲ್, ಅನಂತಪುರ, ಗುತ್ತಿ, ಆದೋನಿ, ಆಲೂರು, ಎಮ್ಮಿಗನೂರು, ರಾಯಚೊಟಿ, ಚಿತ್ತೂರು, ತಿರುಪತಿ, ವರವಕೊಂಡ, ಕಡಪಾ ಡಿಪೋಗಳಿಂದ ಬಳ್ಳಾರಿಗೆ ಪ್ರತಿದಿನ ನೂರಾರು ಆಂಧ್ರ ಬಸ್‌ಗಳು ಬರುತ್ತವೆ. ಆಂಧ್ರಕ್ಕೆ ತೆರಳುವ ಹೆಣ್ಣುಮಕ್ಕಳು ಕರ್ನಾಟಕ ಬಸ್‌ಗಳಲ್ಲಿ ಗಡಿಭಾಗದವರೆಗೆ ಪ್ರಯಾಣಿಸುತ್ತಿದ್ದಾರೆ. ಆಂಧ್ರ ಗಡಿಗೆ ಹೊಂದಿಕೊಂಡಿರುವ ಕಾರೇಕಲ್, ವೀರಾಪುರ, ಗುಂತಕಲ್ಲು, ಜೋಳದರಾಶಿ ಜನರು ಮೊದಲು ಆಂಧ್ರ ಬಸ್‌ಗಳಿಗೆ ತೆರಳುತ್ತಿದ್ದರು. ಈಗ ಆ ಬಸ್‌ಗಳಲ್ಲಿ ತೆರಳುವವರಿಲ್ಲದಂತಾಗಿದೆ. ಗಡೆಕಲ್, ಹಗರಿ, ಪೆಂಚಲಪಾಡು ಮಾರ್ಗವಾಗಿ ಬಳ್ಳಾರಿಯಿಂದ ಗುಂತಕಲ್ಲು ತೆರಳುವ ಆಂಧ್ರದ ಬಸ್‌ಗೆ ಪ್ರತಿ ಪ್ರಯಾಣಿಕರು 75 ರೂ. ಟಿಕೆಟ್ ತಗೆದುಕೊಳ್ಳಬೇಕಿದೆ. ಗಡಿಭಾಗದವರೆಗೆ ಪ್ರಯಾಣಿಸಿ, ಅಲ್ಲಿಂದ ಅದೇ ಬಸ್‌ನಲ್ಲಿ ಟಿಕೆಟ್ ಪಡೆದು ಗುಂತಕಲ್‌ನಲ್ಲಿ ಪಯಣ ಮಾಡುತ್ತಿದ್ದಾರೆ.

ಅಂತರರಾಜ್ಯಕ್ಕಿಲ್ಲ ಅವಕಾಶ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ ಜಿಲ್ಲೆಯಿಂದ ಹೊರಡುವ ಅಂತರರಾಜ್ಯಕ್ಕೆ ಹೋಗುವ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಇಲ್ಲ. ಆಂಧ್ರಪ್ರದೇಶಕ್ಕೆ 50, ತೆಲಂಗಾಣ 12, ಮಹಾರಾಷ್ಟ್ರ 16, ಗೋವಾ 2, ತಮಿಳುನಾಡು 2 ಸೇರಿದಂತೆ ಒಟ್ಟು 82 ಕೆಕೆಆರ್‌ಟಿಸಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಅದರಲ್ಲಿ ಕೆಲವು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಇಲ್ಲ.

24 ಸಾವಿರ ಪ್ರಯಾಣಿಕರು

ಕರ್ನಾಟಕ ಬಸ್‌ಗಳಲ್ಲಿ ಜೂ.11ರ ಮಧ್ಯಾಹ್ನ ಒಂದು ಗಂಟೆಯಿಂದ ಉಚಿತವಾಗಿ ಪ್ರಯಾಣಿಸಲು ಹೆಣ್ಣುಮಕ್ಕಳಿಗೆ ಅವಕಾಶ ನೀಡಲಾಗಿದ್ದು, ಮೊದಲ ದಿನವೇ ಜಿಲ್ಲೆಯಲ್ಲಿ 3400 ಮಹಿಳೆಯರು ಸದ್ಬಳಕೆ ಮಾಡಿಕೊಂಡಿದ್ದಾರೆ. ಜೂ. 12ರಂದು 21 ಸಾವಿರ ಹೆಣ್ಣುಮಕ್ಕಳು ಪ್ರಯಾಣಿಸಿದ್ದಾರೆ. ಕೆಕೆಆರ್‌ಟಿಸಿಗೆ ಗ್ರಾಮೀಣ ಭಾಗದಿಂದ ಹೆಚ್ಚಾಗಿ ಹೆಣ್ಣುಮಕ್ಕಳು ಆಗಮಿಸುತ್ತಿದ್ದಾರೆ. ಇದರಿಂದಾಗಿ ಬಸ್‌ಗಳೆಲ್ಲ ಫುಲ್‌ರಷ್ ಆಗಿವೆ. ಇನ್ನಷ್ಟು ಬಸ್‌ಗಳ ಕೊರತೆಯಿದ್ದು, ಶೀಘ್ರದಲ್ಲಿ ಜಿಲ್ಲೆಗೆ ಆಗಮಿಸಲಿವೆ ಎಂದು ಕೆಕೆಆರ್‌ಟಿಸಿ ಅಧಿಕಾರಿಗಳು ಹೇಳಿದ್ದಾರೆ.

ಬಳ್ಳಾರಿ ಕೇಂದ್ರ ಬಸ್‌ನಿಲ್ದಾಣದಲ್ಲಿ ಕರ್ನಾಟಕ ಬಸ್ ಹತ್ತಿರುವ ಹೆಣ್ಣುಮಕ್ಕಳು.
ಬಳ್ಳಾರಿ ಕೇಂದ್ರ ಬಸ್‌ನಿಲ್ದಾಣದಲ್ಲಿ ಕರ್ನಾಟಕ ಬಸ್ ಹತ್ತಿರುವ ಹೆಣ್ಣುಮಕ್ಕಳು.
ನಷ್ಟದಲ್ಲೂ ಕಾರ್ಯಾಚರಣೆ

ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಕೆಕೆಆರ್‌ಟಿಸಿ ಬಸ್‌ಗಳು 436 ಇದ್ದು, 388 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಪ್ರತಿದಿನ ಸಾರಿಗೆಗೆ 46.65 ಲಕ್ಷ ರೂ. ಆದಾಯ ಬರುತ್ತಿದ್ದರೆ, ವೆಚ್ಚ 56.97 ಲಕ್ಷ ರೂ. ಇದೆ. ಪ್ರತಿದಿನವೂ ನಷ್ಟದಲ್ಲಿ ಸಾರಿಗೆ ಬಸ್‌ಗಳು ಓಡಾಡುತ್ತಿವೆ. ಪ್ರತಿ ಕಿ.ಮೀ.ಗೆ 37.66 ರೂ. ಆದಾಯವಿದ್ದು, 45.99 ರೂ. ವೆಚ್ಚ ಬರುತ್ತಿದೆ. ಪ್ರತಿ ಕಿಮೀಗೆ 8.33 ರೂ. ನಷ್ಟವಾಗುತ್ತಿದೆ.

ಆಂಧ್ರಕ್ಕೆ ಹೊಂದಿಕೊಂಡಿರುವ ಗಡಿಜಿಲ್ಲೆ ಬಳ್ಳಾರಿ ಆಗಿರುವುದರಿಂದ ಇಲ್ಲಿಗೆ ಆಂಧ್ರ ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ. ಆಂಧ್ರಕ್ಕೆ ತೆರಳುವ ಮಾರ್ಗದಲ್ಲಿ ರಾಜ್ಯದ ಗ್ರಾಮಗಳ ಹೆಣ್ಣುಮಕ್ಕಳಿಗೆ ಕೆಕೆಆರ್‌ಟಿಸಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದರಿಂದ ಹೆಚ್ಚಾಗಿ ಕೆಕೆಆರ್‌ಟಿಸಿಗೆ ಹೋಗುತ್ತಿದ್ದಾರೆ.ಬಿ.ಚಾಮರಾಜವಿಭಾಗೀಯ ಸಂಚಾಲನಾಧಿಕಾರಿ, ಕೆಕೆಆರ್‌ಟಿಸಿ ಕರ್ನಾಟಕ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದರಿಂದ ಆಂಧ್ರ ಬಸ್‌ಗಳಲ್ಲಿ ಓಡಾಡುವವರು ಇಲ್ಲದಂತಾಗಿದೆ. ಮೊದಲೆಲ್ಲ ಪ್ರಯಾಣಿಕರಿಂದ ಬಸ್‌ಗಳು ತುಂಬಿರುತ್ತಿದ್ದವು. ಈಗ ಖಾಲಿಯೊಂದಿಗೆ ಹೊರಟಿದ್ದೇವೆ.ಹೆಸರು ಹೇಳಲಿಚ್ಛಿಸದ ಆಂಧ್ರ ಸಾರಿಗೆ ಕಂಡಕ್ಟರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net