ಸಂಕೋಚವಿಲ್ಲದೆ ಸಮಸ್ಯೆ ತಿಳಿಸಿ

State the problem without hesitation
ಮುದ್ದೇಬಿಹಾಳ ಪಟ್ಟಣದ ಎಪಿಎಂಸಿಯ ಕರ್ನಾಟಕ ಬ್ಯಾಂಕ್ ಸಭಾಭವನದಲ್ಲಿ ಕುಂಟೋಜಿ ಚೆನ್ನವೀರ ದೇವರು ಮಾತನಾಡಿದರು. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಪ್ರಭುಗೌಡ ದೇಸಾಯಿ, ಭೀಮಶಿ ಹೂಗಾರ, ಹ.ಮ.ಪೂಜಾರ ಇತರರಿದ್ದರು.
Published on

ಮುದ್ದೇಬಿಹಾಳ: ಪ್ರಜಾಪ್ರಭುತ್ವದಲ್ಲಿ ನಿಮ್ಮ ಸೇವಕರಾಗಿ, ಪ್ರತಿನಿಧಿಯಾಗಿ ಕೆಲಸ ಮಾಡುತ್ತೇವೆ. ಯಾರೂ ಸಂಕೋಚಪಡದೆ ಸಮಾಜದ ಹಿತದೃಷ್ಟಿಯಿಂದ ಏನೇ ವಿಷಯ ಇದ್ದರೂ ಕೇಳಿ. ಕೆಲವರು ಎಂ.ಎಲ್.ಎ ಆದ ಕೂಡಲೇ ದೊಡ್ಡವರಾಗಿ ಬಿಡುತ್ತೇವೆ ಎಂದುಕೊಳ್ಳುತ್ತಾರೆ. ಆದರೆ ಜನ ನಮ್ಮನ್ನು ಆರಿಸಿ ಕಳಿಸಿದ್ದಾರೆ ಎನ್ನುವುದನ್ನು ಮರೆಯಬಾರದು ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ಹೂಗಾರ ಸಮಾಜದ ರಾಜ್ಯಮಟ್ಟದ ವಧು- ವರರ ಸಮಾವೇಶ, ಹೂಗಾರ ಸಮಾಜದ ಸಾಂಸ್ಕೃತಿಕ ಇತಿಹಾಸ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದಲ್ಲಿ ಗುರುತಿಸಿಕೊಳ್ಳಬೇಕಾದರೆ ಸಂಘಟನೆ ಬಹುಮುಖ್ಯವಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಹೂಗಾರ ಸಮಾಜಕ್ಕೆ ಬೇಕಾದ ಅನುಕೂಲತೆ ಮಾಡಿಕೊಡಲು ಶ್ರಮಿಸುತ್ತೇನೆ ಎಂದರು.

ಕುಂಟೋಜಿ ಚೆನ್ನವೀರ ದೇವರು ಸಾನಿಧ್ಯ ವಹಿಸಿ ಮಾತನಾಡಿ, ಜಾತಿ-ಜಾತಿಗಳ ಮಧ್ಯೆ ಸಣ್ಣ ಸಣ್ಣ ಸಮಾಜದವರು ರಾಜಕೀಯವಾಗಿ ಗುರುತಿಸಿಕೊಳ್ಳಲಾಗುತ್ತಿಲ್ಲ. ನಮ್ಮ ಬಹುಮುಖದ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಜಾತಿಯಿಂದ ಇನ್ನೊಬ್ಬರನ್ನು ನೋಡಬೇಡಿ. ಸ್ವಾವಲಂಬನೆ ಬದುಕಿನಿಂದ ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಭೀಮಶಿ ಹೂಗಾರ, ಮಕ್ಕಳ ಸಾಹಿತಿ ಹ.ಮ.ಪೂಜಾರ ಮಾತನಾಡಿದರು.

ಪ್ರಮುಖರಾದ ಸತೀಶ ಓಸ್ವಾಲ್, ಸಮಾಜ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅರವಿಂದ ಹೂಗಾರ, ಬಿ.ಎಂ.ಹೂಗಾರ, ಸೂರ್ಯಕಾಂತ ುಲಾರಿ, ಶಿವಶರಣಪ್ಪ ಹೂಗಾರ, ಸುಭಾಷ ಹೂಗಾರ, ಎಚ್.ಬಿ.ಹೂಗಾರ, ವೆಂಕಪ್ಪ ಹೂಗಾರ, ಸಣ್ಣಪ್ಪ ಹೂಗಾರ, ಸಂಗಪ್ಪ ಹೂಗಾರ ಇದ್ದರು. ಹೂಗಾರ ಸಮಾಜದ ತಾಲೂಕಾಧ್ಯಕ್ಷ ಸುರೇಶ ಹೂಗಾರ ರಚಿಸಿದ ಹೂಗಾರ ಸಮಾಜದ ಸಾಂಸ್ಕೃತಿಕ ಇತಿಹಾಸ ಪುಸ್ತಕವನ್ನು ಪ್ರೊ.ಎಸ್.ಎಸ್.ಹೂಗಾರ ಪರಿಚಯಿಸಿದರು. ಸಂಗಮೇಶ ಶಿವಣಗಿ ಪ್ರಾರ್ಥಿಸಿದರು. ಬಸವರಾಜ ಹೂಗಾರ ಸ್ವಾಗತಿಸಿದರು. ಶ್ರೀಶೈಲ ಹೂಗಾರ ಹಾಗೂ ಗೋಪಾಲ ಹೂಗಾರ ನಿರೂಪಿಸಿದರು.

ಸಂಘಟನೆಯಲ್ಲಿ ಇರುವವರು ಮಾತನಾಡುತ್ತಿರಬೇಕು. ಇಲ್ಲದಿದ್ದರೆ ನಾವು ಮೌನವಾಗಿ ಬಿಡುತ್ತೇವೆ. ನಮ್ಮ ಅಧಿಕಾರ, ಹಕ್ಕಿಗೆ ಚ್ಯುತಿ ಬಾರದಂತೆ ಮಾತನಾಡಬೇಕು. ವೈಯಕ್ತಿಕವಾಗಿ ಅಲ್ಲ. ಸಮಾಜಮುಖಿಯಾಗಿ ಕೆಲಸ ಮಾಡುವವರು ಧ್ವನಿ ಎತ್ತದೆ ಇದ್ದರೆ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಬೆಲೆ ಬರುವುದಿಲ್ಲ. ನ್ಯೂನ್ಯತೆಗಳನ್ನು, ಯಾವ ಯೋಜನೆಗಳಲ್ಲಿ ವ್ಯತ್ಯಾಸವಾಗುತ್ತದೆ ಎಂಬುದನ್ನು ಗಮನಕ್ಕೆ ತರಬೇಕು. ಅಂತಹ ಸಲಹೆಗಳನ್ನು ಸ್ವೀಕರಿಸುವ ಕೆಲಸ ಮಾಡುತ್ತೇವೆ.
ಸಿ.ಎಸ್.ನಾಡಗೌಡ ಅಪ್ಪಾಜಿ, ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net