

ಕೋಲಾರ: ಪೊಲೀಸರು ಮನೆಮನೆಗೆ ಭೇಟಿ ನೀಡಿದಾಗ ಸಮಸ್ಯೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಹೇಳಿದರು.
ಪೊಲೀಸ್ ಇಲಾಖೆಯಿಂದ ತಾಲೂಕಿನ ಸುಗಟೂರು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಸಮಾಜಘಾತುಗಳ ವ್ಯಕ್ತಿಗಳ ಮೇಲೆ ನಿಗಾವಹಿಸಲು ಬೀಟ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ವಿನೂತನ ಕಾರ್ಯಕ್ರಮವು ಮತ್ತಷ್ಟು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮನೆಗಳಿಗೆ ಪೊಲೀಸರು ಭೇಟಿ ನೀಡಿದಾಗ ಅಹವಾಲು ಹೇಳಿಕೊಳ್ಳಬೇಕು, ಮಹಿಳೆಯರ ಸಮಸ್ಯೆ ಕೇಳಲು ಮಹಿಳಾ ಸಿಬ್ಬಂದಿ ಆಗಮಿಸುತ್ತಾರೆ. ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳಲು ಅವಕಾಶವಿದ್ದು, ತೊಂದರೆಯಿದ್ದರೆ ರಕ್ಷಣೆ ನೀಡಲು ಅನುಕೂಲವಾಗುತ್ತದೆ ಎಂದರು.
ಮನೆಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಸುಗಟೂರಿನಲ್ಲಿ ಪ್ರಾರಂಭಿಸಿದ್ದು, ಇದು ಇಡೀ ರಾಜ್ಯಕ್ಕೆ ಮಾದರಿಯಾಗಿ ಯಶಸ್ಸು ಕಾಣಬೇಕು, ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕೋರಿದರು.
ಸಾರ್ವಜನಿಕರಿಂದ ಸಂಗ್ರಹಿಸಿದ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ವರದಿ ಮಾಡುತ್ತಾರೆ. ಅದನ್ನು ನಿಯಮಾನಸಾರ ಇತ್ಯರ್ಥಪಡಿಸಲು ಕ್ರಮವಹಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿ, ಮುಖ್ಯ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಯುವುದು, ರಸ್ತೆಯಲ್ಲಿ ಸುರಕ್ಷಣಾ ಕ್ರಮಗಳನ್ನು ಅಳವಡಿಸುವುದು, ಸಂಚಾರಿ ನಿಯಮ ಪಾಲನೆ ಕುರಿತು ಈ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಪೊಲೀಸರನ್ನು ಸಮಾಜದ ಭದ್ರತಾ ಪ್ರತಿನಿಧಿಗಳು, ನಾಗರಿಕರ ಮೂಲ ಹಕ್ಕುಗಳ ರಕ್ಷಕರು ಎಂದು ಸಂಭೋದಿಸಲಾಗುತ್ತದೆ. ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವುದು, ಅಪರಾಧಗಳ ತಡೆ ಹಾಗೂ ಪತ್ತೆ, ನಿರ್ಭಯ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪೊಲೀಸರ ಮೇಲಿದೆ ಎಂದರು.
ಪೊಲೀಸ್ ಸೇವೆಗಳ ಪ್ರತಿಯೊಂದು ಸ್ಥರದಲ್ಲೂ ಸಾರ್ವಜನಿಕರ ಬಂಬಲ, ಸಹಭಾಗಿತ್ವವನ್ನು ಸಾಧಿಸಿಕೊಳ್ಳುವುದರಿಂದ ಮಾತ್ರ ಉತ್ಕೃಷ್ಟ ಸೇವೆ ಒದಗಸಿಲು ಸಾಧ್ಯ. ಜನರಿಗೆ ಅತ್ಯುತ್ತಮ ಸೇವೆ ಒದಗಿಸುವುದೇ ಇಲಾಖೆಯ ಗುರಿ ಎಂದು ಹೇಳಿದರು.
ಸಾರ್ವಜನಿಕರು ನೀಡುವ ದೂರುಗಳ ಆಧಾರದ ಮೇಲೆ ಅಧಿಕಾರಿಗಳು ಪ್ರತಿಕ್ರಿಯಿಸುತ್ತಾರೆ. ಆದರೆ ಈ ವ್ಯವಸ್ಥೆಯನ್ನು ಸಕ್ರಿಯೆ ಸೇವೆ ಒದಗಿಸುವ ವ್ಯವಸ್ಥೆಯನ್ನಾಗಿ ಪರಿವರ್ತನೆಗೊಳಿಸುವ ಕಡೆಗೆ ಹೆಜ್ಜೆ ಇರುವ ಅವಶ್ಯಕತೆಯಿದೆ. ಪೊಲೀಸ್ ಸೇವೆಯಲ್ಲಿ ಸಮುದಾಯ ಪಾಲ್ಗೊಳ್ಳುವಿಕೆ ಹೆಚ್ಚುವುದರಿಂದ ನಿಕಟ ಸಂಬಂಧ, ಏರ್ಪಟ್ಟು ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲು ಸನ್ನದ್ಧರಾಗಬಹುದು ಎಂದರು.
ಸುಗಟೂರು ಗ್ರಾಪಂ ಅಧ್ಯಕ್ಷ ಭೂಪತಿಗೌಡ, ಮಾಜಿ ಅಧ್ಯಕ್ಷ ವಿಶ್ವನಾಥ್, ಸುಗಟೂರು ವಿಎಸ್ಎಸ್ಎನ್ ಅಧ್ಯಕ್ಷ ಭಾಸ್ಕರ್, ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಕಾಂತರಾಜು, ಮುಖಂಡ ನಾರಾಯಣಗೌಡ ಇದ್ದರು.