ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಅಹೋರಾತ್ರಿ ಧರಣಿ ಆರಂಭ

5
Published on

ಮೈಸೂರು: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ರೈತರಿಗೆ ಕೊಡಬೇಕಾದ ಲಾಭಾಂಶದ ಬಾಕಿ, ಟನ್ ಕಬ್ಬಿಗೆ 4 ಸಾವಿರ ರೂ. ಬೆಲೆ ನಿಗದಿ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಮಂಗಳವಾರ ಅಹೋರಾತ್ರಿ ಧರಣಿ ಆರಂಭಗೊಂಡಿತು.
ನಜರ್‌ಬಾದ್‌ನ ಮಹದೇಶ್ವರ ದೇವಸ್ಥಾನದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯಲ್ಲಿ ಸಾಗಿದ ಪ್ರತಿಭಟನಾಕಾರರು, ಸಿದ್ದಾರ್ಥ ಬಡಾವಣೆಯ ನೂತನ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಯಿಂದ ಕಳೆದ ವರ್ಷದ ಲಾಭಾಂಶ ಪ್ರತಿ ಟನ್‌ಗೆ 150 ರೂ ಬಾಕಿ ಹಾಗೂ ಟನ್ ಕಬ್ಬಿಗೆ 4 ಸಾವಿರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಸರ್ಕಾರ ಎಪಿಎಂಸಿ ಮೂಲಕ ತೂಕದ ತಂತ್ರ ಅಳವಡಿಸಬೇಕು. ಕಟಾವು ಮತ್ತು ಸಾಗಣೆಯಲ್ಲಿ ತಾರತಮ್ಯ ಮಾಡದೆ ರಾಜ್ಯಾದ್ಯಂತ ಏಕರೀತಿ ಇರಬೇಕು. ಕಬ್ಬು ಮುಕ್ತ ಮಾರುಕಟ್ಟೆಗೆ ಅವಕಾಶ ಇರಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರ ಕಬ್ಬಿನ ಇಳುವರಿಯನ್ನು ಶೇ.10.5ಕ್ಕೆ ಏರಿಕೆ ಮಾಡಿ, ಪ್ರತಿ ಟನ್‌ಗೆ 3,400 ರೂ ನಿಗದಿ ಮಾಡಿದೆ. ಇದನ್ನು ಮರುಪರಿಶೀಲಿಸಿ ಕಬ್ಬಿನ ಇಳುವರಿಯನ್ನು ಶೇ.8.5ಕ್ಕೆ ಇಳಿಸಿ ಟನ್ ಕಬ್ಬಿಗೆ 4,000 ರೂ. ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ತ್ವರಿತವಾಗಿ ಕಾಮಗಾರಿ ಮುಗಿಸಿ:
ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗಬೇಕು. ಅಕ್ರಮ- ಸಕ್ರಮ ಮರು ಜಾರಿಯಾಗಬೇಕು. ಕಬಿನಿ, ಕಾವೇರಿ ನಾಲೆಗಳಿಗೆ ಭತ್ತ ಬೆಳೆಯಲು ಕೆರೆ ಕಟ್ಟೆ ತುಂಬಿಸಲು ಅಂತರ್ಜಲ ವೃದ್ಧಿಗಾಗಿ ಯಾವುದೇ ಕಾಲಮಿತಿ ಇಲ್ಲದೆ ನಿರಂತರವಾಗಿ ನೀರು ಹರಿಸಬೇಕು. ನಂಜನಗೂಡು ತಾಲೂಕಿನ 21 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಮುದ್ದಹಳ್ಳಿ, ಅಂಬಳೆ, ಹಲ್ಲರೆ, ಸಿದ್ದಯ್ಯನಹುಂಡಿ, ಎಲೆಚೆಗೆರೆ, ನವಿಲೂರು ಹುರಾ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಶ್ರೀರಾಮ ಸಕ್ಕರೆ ಕಾರ್ಖಾನೆ ಕಾನೂನು ರೀತಿಯ ಒಪ್ಪಂದ ಮತ್ತು ನೋಂದಣಿ ಪ್ರಕ್ರಿಯೆ ಮುಗಿಸಿ ಕಬ್ಬು ಅರೆಯುವಿಕೆ ಕೆಲಸ ಪ್ರಾರಂಭಿಸಬೇಕು. ಕಾವೇರಿ ಗ್ರಾಮೀಣ ಬ್ಯಾಂಕ್ ರೈತರಿಗೆ ಕಿರುಕುಳ ನೀಡುತ್ತಿದ್ದು ಒಟಿಎಸ್ ಮಾಡಿಕೊಳ್ಳದೆ ಹೊಸ ಸಾಲ ನೀಡುತ್ತಿಲ್ಲ. ಖಾಸಗಿ ಬ್ಯಾಂಕ್‌ಗಳು ಟ್ರ್ಯಾಕ್ಟರ್ ಸಾಲ ನೀಡಿ ಜಪ್ತಿ ಮಾಡಿ ಹೊರ ರಾಜ್ಯಗಳಲ್ಲಿ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು ಎಂದು ಮುಖಂಡರು ಆಗ್ರಹಿಸಿದರು.
ಕಾಡು ಪ್ರಾಣಿಗಳ ಹಾವಳಿ ತಡೆಯಲು ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು. ಎಲ್ಲ ಬೆಳೆಗಳಿಗೂ ಎಂಎಸ್‌ಪಿ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಆಲತ್ತೂರು ಅಂಬಿ ಸಿದ್ದಲಿಂಗಪ್ಪ, ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಅಂಕನಹಳ್ಳಿ ತಿಮ್ಮಪ್ಪ, ಹತ್ತಹಳ್ಳಿ ಸೌಮ್ಯರಾಜ್, ಬನ್ನೂರು ಕೃಷ್ಣಪ್ಪ, ಹಾಲಿನ ನಾಗರಾಜ್, ರವಿ ಹಾಡ್ಯ, ಮುದ್ದಳ್ಳಿ ಚಿಕ್ಕಸ್ವಾಮಿ, ಮಲಿಯೂರು ಹರ್ಷ, ಕಸವನಹಳ್ಳಿ ಮಂಜೇಶ, ಅರಳಿಕಟ್ಟೆ ಕುಮಾರ್, ನೀಲಮ್ಮ, ರಾಣಿ, ಮಂಜುಳಾ, ಮಂಗಳಾ ಮಹದೇವಸ್ವಾಮಿ. ದೇವಿರಮ್ಮನಹಳ್ಳಿ ನಂದೀಶ್, ಸಿದ್ದಲಿಂಗಸ್ವಾಮಿ ಇತರರು ಇದ್ದರು.

ಸಂಧಾನಕ್ಕೆ ಜಿಲ್ಲಾಧಿಕಾರಿ ಯತ್ನ ವಿಫಲ:
ಧರಣಿ ನಡೆಸುತ್ತಿದ್ದವರ ಬಳಿ ತೆರಳಿದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಸಂಧಾನಕ್ಕೆ ಯತ್ನಿಸಿದರು. ವಿಧಾನಸಭೆ ಕಲಾಪ ನಡೆಯುತ್ತಿರುವುದರಿಂದ ಈಗ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಭಟನೆ ಕೈ ಬಿಟ್ಟು ಮುಂದೆ ಸಭೆ ನಿಗದಿಪಡಿಸೋಣ. ಅಲ್ಲಿಯವರೆಗೂ ಹತ್ತು ದಿನಗಳ ಕಾಲಾವಕಾಶ ನೀಡುವಂತೆ ಕೋರಿದರು.
ಪಟ್ಟು ಬಿಡದ ಪ್ರತಿಭಟನಾನಿರತರು: ಹಲವು ಬಾರಿ ಪ್ರತಿಭಟನೆ ಮಾಡಿಕೊಂಡು ಬಂದಿದ್ದರೂ ಇದುವರೆವಿಗೂ ಯಾವುದೇ ಫಲ ದೊರಕಿಲ್ಲ. ಹಾಗಾಗಿ ಯಾವಾಗ ಸಭೆ ಕರೆಯುತ್ತೀರಾ ಎನ್ನುವುದನ್ನು ಲಿಖಿತವಾಗಿ ನೀಡಬೇಕು. ಅಲ್ಲಿಯವರೆಗೂ ಧರಣಿ ಮುಂದುವರಿಯಲಿದೆ ಎಂದು ಪಟ್ಟು ಹಿಡಿದರು.
ಈ ಕುರಿತು ಪರಿಶೀಲಿಸಿ ಸಭೆಗೆ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರೂ, ದಿನಾಂಕ ನಿಗದಿಪಡಿಸುವ ತನಕ ಧರಣಿ ಮುಂದುವರಿಸಲು ಪ್ರತಿಭಟನಾ ನಿರತರು ನಿರ್ಧರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net