

ಉಡುಪಿ: ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಯುವಂತಾಗಲು ಪ್ರತಿ ಅಭ್ಯರ್ಥಿಗಳ ವೆಚ್ಚದ ಬಗ್ಗೆ ಸಂಬಂಧಿತ ಅಧಿಕಾರಿಗಳು ನಿಗಾ ವಹಿಸಬೇಕು. ಅಲ್ಲದೆ, ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ರಾಜ್ಯ ವಿಶೇಷ ವೆಚ್ಚ ವೀಕ್ಷಕ ಬಿ.ಮುರುಳಿಕುಮಾರ್ ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನೋಡಲ್ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿ ಮಾತನಾಡಿ, ಚುನಾವಣಾ ಕಾರ್ಯನಿರ್ವಹಿಸುವಾಗ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗಬಾರದು. ಯಾವುದೇ ಸಂದೇಹ ಇದ್ದಲ್ಲಿ ತಕ್ಷಣ ಮೇಲಾಧಿಕಾರಿಗಳ ಸಹಾಯ ಪಡೆಯಬೇಕು ಎಂದರು.
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ 3 ಚೆಕ್ಪೋಸ್ಟ್ ತೆರೆಯಬೇಕು. ಎಲ್ಲ ವಅಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿಯೇ ಬಿಡಬೇಕು. ಹಣ ಮತ್ತು ಮದ್ಯ ಸೇರಿದಂತೆ ಇನ್ನಿತರ ಸಾಮಾಗ್ರಿಗಳು ಇದೆಯೇ ಎಂದು ಕೂಲಂಕಷವಾಗಿ ಪರಿಶೀಲಿಸಬೇಕು. ಯಾವುದೇ ವಸ್ತುಗಳಿದ್ದಲ್ಲಿ ಎಲ್ಲಿಂದ ಬಂದಿದ್ದು, ಯಾವ ಪ್ರದೇಶಕ್ಕೆ ತಲುಪುತ್ತಿದೆ ಎಂಬ ಅಗತ್ಯ ದಾಖಲೆ ಇರಲೇಬೇಕು. 10 ಲಕ್ಷ ರೂ.ಗಿಂತ ಹೆಚ್ಚು ಹಣ ಪತ್ತೆಯಾದಲ್ಲಿ ಆದಾಯ ತೆರಿಗೆ ಇಲಾಖಾಧಿಕಾರಿಗಳಿಗೆ ಹಾಗೂ ಚುನಾವಣಾ ವೆಚ್ಚ ವೀಕ್ಷಕರಿಗೆ ಮಾಹಿತಿ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಸಲು ಕೈಗೊಂಡ ಸಿದ್ಧತೆ ವಿವರಿಸಿದರು. ವಿವಿಧ ತಂಡಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ನೇಮಿಸಿರುವ ಬಗ್ಗೆಯೂ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ವೆಚ್ಚ ವೀಕ್ಷಕ ಅಲೋಕ್ಕುಮಾರ್, ಎಂಸಿಸಿ ನೋಡಲ್ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪ್ರತಿಕ್ ಬಾಯಲ್, ಕೋಸ್ಟಲ್ ಗಾರ್ಡ್ನ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್, ಡಿಎಫ್ಒ ಗಣಪತಿ, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಹೆಚ್ಚವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ವಿವಿಧ ಸಮಿತಿಯ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಚುನಾವಣಾ ಅಕ್ರಮಕ್ಕೆ ಕಡಿವಾಣ ಹಾಕಲು ರೂಪಿಸಿರುವ ಸಿ-ವಿಜಿಲ್ ಬಗ್ಗೆ ಜನರಿಗೆ ಇನ್ನೂ ಹೆಚ್ಚು ಅರಿವು ಮೂಡಿಸಬೇಕು. ಅದರಲ್ಲಿ ದೂರು ನೀಡುವುದು ಹೇಗೆ? ಅಪ್ಲೋಡ್ ಮಾಡುವುದು ಹೇಗೆಂದು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸಿ -ವಿಜಲ್ ಮೂಲಕ ಬಂದ ದೂರುಗಳಿಗೆ ತಕ್ಷಣವೇ ಸ್ಪಂದಿಸುವ ಕೆಲಸವಾಗಬೇಕು. ಮತದಾನದ ಜಾಗೃತಿ ಮೂಡಿಸಲು ವ್ಯವಸ್ಥಿತ ಶಿಕ್ಷಣ ಹಾಗೂ ಅರಿವು ಮೂಡಿಸಿ, ಶೇಕಡವಾರು ಮತದಾನ ಹೆಚ್ಚಿಸಬೇಕು. ಬೇಸಿಗೆ ಹಿನ್ನೆಲೆಯಲ್ಲಿ ಎಲ್ಲ ಮತಗಟ್ಟೆಗಳಲ್ಲಿ ನೆರಳು, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಬಿ.ಮುರುಳಿಕುಮಾರ್ ಸೂಚನೆ ನೀಡಿದರು.