

ವಿಜಯಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರ ಹೆಚ್ಚಿಸಿರುವುದನ್ನು ಖಂಡಿಸಿ ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ಬುಧವಾರ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನ್‌ರೆಡ್ಡಿ ಮಾತನಾಡಿ, ಕೆಎಸ್‌ಆರ್‌ಟಿಸಿ ತಮ್ಮ ಎಲ್ಲಾ ಅಂಗ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿದ್ದು, ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಸ್‌ದರ ಹೆಚ್ಚಳ ಮಾಡಿದ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಜನತೆ ಈಗಾಗಲೇ ಭೀಕರ ನೆರೆ ಹಾವಳಿಯಿಂದ ತತ್ತರಿಸಿದ್ದು ಇನ್ನು ಚೇತರಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ ಹೇರಿಕೆಯಿಂದಾಗಿ ದೇಶದಲ್ಲಿ ತೀವ್ರ ಆರ್ಥಿಕ ಹಿನ್ನಡೆಯುಂಟಾಗಿ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಕೂಡಲೇ ಬಸ್ ಪ್ರಯಾಣ ದರ ಹೆಚ್ಚಳದ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಭರತಕುಮಾರ ಮಾತನಾಡಿ, ಸಾರ್ವಜನಿಕರ ಸೇವೆಗಾಗಿ ಸ್ಥಾಪಿಸಿರುವ ಸಾರಿಗೆ ಸಂಸ್ಥೆ ಇಂದು ಲಾಭ-ನಷ್ಟದ ಬಗ್ಗೆ ಮಾತನಾಡುತ್ತಿರುವುದು ವಿಷಾದನೀಯ. ತಮಿಳುನಾಡು, ಪಶ್ಚಿಮ ಬಂಗಾಳ, ರಾಜಧಾನಿ ದೆಹಲಿಯಲ್ಲಿ ಅತೀ ಕಡಿಮೆ ದರ ನಿಗದಿಪಡಿಸಲಾಗಿದೆ. ಅಲ್ಲಿನ ಸಾರಿಗೆ ಸಂಸ್ಥೆಗಳ ರೀತಿ ಸಾಮಾಜಿಕ ಕಾರ್ಯ ಮಾಡಲಿ ಎಂದು ಒತ್ತಾಯಿಸಿದರು.
ವಿಜಯಪುರ ಸ್ಲಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಕ್ರಂ ಮಾಶ್ಯಾಳಕರ ಮಾತನಾಡಿ, ಸಾರ್ವಜನಿಕ ಸೇವಾ ಸಂಸ್ಥೆಗಳು, ಸರ್ಕಾರ ಲಾಭ ನಷ್ಟದ ಬಗ್ಗೆ ಲಕ್ಷ್ಯಕೊಡದೇ ಶಿಕ್ಷಣ, ಆರೋಗ್ಯ, ಸಾರಿಗೆಗಳಂತಹ ಸೇವಾ ವಲಯದ ಸೌಲಭ್ಯಗಳು ಜನರಿಗೆ ಉಚಿತವಾಗಿ ತಲುಪಿಸಯವಂತೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಮಲ್ಲಿಕಾರ್ಜುನ ಎಚ್ ಟಿ., ಮುಖಂಡರಾದ ಬಾಳು ಜೇವೂರ, ಸಿದ್ಧಲಿಂಗ ಬಾಗೇವಾಡಿ, ಶಿವಬಾಳಮ್ಮ ಕೊಂಡಗೂಳಿ, ಸುನೀಲ ಸಿದ್ರಾಮಶೆಟ್ಟಿ, ದೀಪಾ ವಡ್ಡರ, ಕಾವೇರಿ ರಜಪೂತ, ಪ್ರಕಾಶ ಕಿಲಾರೆ ಇನ್ನಿತರರು ಭಾಗವಹಿಸಿದ್ದರು.
ರಾಜ್ಯ ಸಾರಿಗೆ ಸಂಸ್ಥೆ ಬಸ್‌ದರ ಏರಿಕೆ ಮಾಡಿರುವುದಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ಖಂಡಿಸಿದೆ. ಜನಸಾಮಾನ್ಯರಿಗೆ ಹೊರೆಯಾಗಿದೆ. ಖಾಸಗಿ ವಾಹನ ಮಾಲೀಕರಿಗೆ ಹಾಗೂ ಬಂಡವಾಳಶಾಹಿ ತೈಲ ಕಂಪನಿ ಮಾಲೀಕರಿಗೆ ಸುಲಿಗೆ ಮಾಡಲು ಅನೂಕೂಲ ಮಾಡಿಕೊಡಲಾಗಿದೆ ಎಂದು ಸಂಘದ ರಾಜ್ಯಉಪಾಧ್ಯಕ್ಷ ಭೀಮಶಿ ಕಲಾದಗಿ, ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ, ಜನವಾದಿ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಸುರೇಖಾ ರಜಪೂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.