

ವಿಜಯಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ರಾಷ್ಟ್ರೀಯ ಬಂಜಾರ ಟೈಗರ್ಸ್ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯ ಉಪಾಧ್ಯಕ್ಷ ಸಚಿನ್ ಚವಾಣ್ ಮಾತನಾಡಿ, ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳನ್ನು ಸರ್ಕಾರದಲ್ಲಿ ವಿಲೀನಗೊಳಿಸಿ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಮೂಲಸೌಲಭ್ಯ ನೀಡಬೇಕು. ನಿಗಮಗಳಲ್ಲಿ 1.25 ಲಕ್ಷ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಹಗಲು ರಾತ್ರಿ ಎನ್ನದೆ ಸರಿಯಾದ ಊಟ ಉಪಚಾರವಿಲ್ಲ. ಸಮಯಕ್ಕೆ ಸರಿಯಾದ ನಿದ್ದೆ ವಿಶ್ರಾಂತಿ ಇಲ್ಲ. ಆದ್ದರಿಂದಲೇ ಸಂಸ್ಥೆಗೆ ದೇಶದಲ್ಲೇ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂದು ಪ್ರಶಸ್ತಿ ಬಂದಿವೆ ಎಂದರು.
ರಾಷ್ಟ್ರೀಯ ಬಂಜಾರ ಟೈಗರ್ಸ್ ರಾಜ್ಯಾಧ್ಯಕ್ಷ ಪರಮೇಶ್ವರ ಚವಾಣ್ ಮಾತನಾಡಿ, ಅತೀ ಒತ್ತಡದಲ್ಲಿ ಸಾರಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಮೂಲ ಸೌಕರ್ಯ ಒದಗಿಸುವ ಕೆಲಸ ಸರ್ಕಾರದಿಂದ ಆಗಬೇಕು. ಅವರಿಗೆ ವಸತಿ ಗೃಹ ಹಾಗೂ ಅವರ ಮಕ್ಕಳಿಗೆ ಪ್ರತ್ಯೇಕ ಶಾಲೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಕೆಸರಟ್ಟಿ ಸೋಮಲಿಂಗ ಮಹಾರಾಜರು ಪ್ರತಿಭಟನೆಯ ನೇತೃತ್ವವಹಿಸಿದ್ದರು. ಗೋಪಾಲ ಮಹಾರಾಜರು, ಸಾರಿಗೆ ನೌಕರರ ಕೂಟ ರಾಜ್ಯ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಕೆ., ವಿಜಯಪುರ ವಿಭಾಗದ ಅಧ್ಯಕ್ಷ ವೆಂಕಟೇಶ ಲಮಾಣಿ, ಪ್ರಧಾನ ಕಾರ್ಯದರ್ಶಿ ಸಚಿನ್ ಕುಮಾರ ಕಾಖಂಡಕಿ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಕೂಟನೂರ, ಸಲೀಮ ತಾಳಿಕೋಟಿ, ಎಚ್.ಪಿ. ಬಬಲೇಶ್ವರ, ಪ್ರೇಮಸಿಂಗ ಚವಾಣ್, ರಾಜು ಜಾಧವ, ಶಿವು ಬೈಚಬಾಳ ಹಾಗೂ ನೌಕರರು ಭಾಗವಹಿಸಿದ್ದರು.