ಜ. 17 ರಿಂದ ರಾಜ್ಯ ಒಲಂಪಿಕ್ಸ್​ ಕ್ರೀಡಾಕೂಟ

udp-1-sports
Published on

ಉಡುಪಿ: ಕರ್ನಾಟಕ ರಾಜ್ಯ ಒಲಂಪಿಕ್ಸ್​ ಸಂಸ್ಥೆ ವತಿಯಿಂದ ಜ. 17 ರಿಂದ 8 ದಿನ ರಾಜ್ಯದ ಒಲಂಪಿಕ್ಸ್​ ಕ್ರೀಡಾಕೂಟದಲ್ಲಿ ನಗರದಲ್ಲಿ 11 ಕ್ಕೂ ಹೆಚ್ಚು ಕ್ರೀಡೆಗಳು ನಡೆಯಲಿದೆ. ಸುಮಾರು 2500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದು, ಕ್ರೀಡಾ ಚಟುವಟಿಕೆಗಳು ಶಿಸ್ತು ಬದ್ಧವಾಗಿ ನಡೆಸಲು ಯೋಜನೆಗಳನ್ನು ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅಜ್ಜರಕಾಡು ಜಿಲ್ಲಾ ಮಟ್ಟದ ಕ್ರೀಡಾಂಗಣದಲ್ಲಿ ಮೈದಾನದ ವ್ಯವಸ್ಥೆ, ಕ್ರೀಡಾಪಟುಗಳಿಗೆ ವಸತಿ ಸೇರಿದಂತೆ ಮತ್ತಿತರ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಅಜ್ಜರಕಾಡಿನಲ್ಲಿ ಅಥ್ಲೆಟಿಕ್ಸ್​, ಜೂಡೋ, ಕುಸ್ತಿ, ಬಾಕ್ಸಿಂಗ್​, ಕಬ್ಬಡಿ, ಸೈಕ್ಲಿಂಗ್​ಗಳು ನಡೆದರೆ, ಮಾಹೆ ವಿಶ್ವ ವಿದ್ಯಾನಿಲಯದ ಕ್ರೀಡಾಂಗಣದಲ್ಲಿ ಲಾಂಗ್​ ಟೆನ್ನಿಸ್​, ಟೇಬಲ್​ ಟೆನ್ನಿಸ್​ ಹಾಗೂ ಹಾಕಿ ಕ್ರೀಡೆಗಳು ನಡೆಯಲಿದೆ. ಬ್ರಹ್ಮಾವರದ ಬೈಕಾಡಿಯ ಸ್ವರ್ಣಾ ನದಿಯಲ್ಲಿ ಕಯಾಕಿಂಗ್​ ನಡೆಯಲಿದೆ ಎಂದರು.

ಶಾಸಕ ಯಶ್​ಪಾಲ್​ ಎ ಸುವರ್ಣ ಮಾತನಾಡಿ, ಒಲಂಪಿಕ್ಸ್​ ಕ್ರೀಡಾ ಕೂಟದಲ್ಲಿ ಸ್ಪರ್ಧಿಸಲು ಜಿಲ್ಲೆಯ ವಿವಿಧ ಕ್ರೀಡಾಪಟುಗಳು, ತೀರ್ಪುಗಾರರು ಹಾಗೂ ಅಧಿಕಾರಿಗಳು ಆಗಮಿಸಲಿದ್ದು, ವಸತಿ ಸೌಕರ್ಯ, ಊಟೋಪಚಾರದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ. ಅರುಣ್​ ಕೆ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಉದಯ್​ ಕುಮಾರ್​ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್​ ಕುಮಾರ್​ ಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್​. ಲಮಾಣಿ, ಐ.ಟಿ.ಡಿ.ಪಿ. ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net