

ಬಳ್ಳಾರಿ: ರಾಜ್ಯದಲ್ಲಿ ಓಲೈಕೆ ಹಾಗೂ ಸ್ವಜಾತಿ ರಾಜಕೀಯ ನಡೆದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಎಂಎಲ್ಸಿ ಎಚ್.ವಿಶ್ವನಾಥ ಬೇಸರ ವ್ಯಕ್ತಪಡಿಸಿದರು.
ನಗರದ ಬಿಪಿಎಸ್‌ಸಿ ಶಾಲೆಯಲ್ಲಿ ಶನಿವಾರ ಸಿರಿಗೇರಿಯ ಅನ್ನಪೂರ್ಣ ಪ್ರಕಾಶನದಿಂದ ಪ್ರಕಟಿತ ಆರ್.ಟಿ.ವಿಠಲಮೂರ್ತಿ ಅವರ ‘ದುಡ್ಡಿಗೆ ಸೋತ ಭಾರತ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಸಂವಿಧಾನದ ಚೌಕಟ್ಟಿನೊಳಗೆ ಸರ್ಕಾರಗಳು ಕಾರ್ಯನಿರ್ವಹಿಸಬೇಕು. ಸ್ವಜಾತಿ ರಾಜಕೀಯಕ್ಕಾಗಿ ಮೇಲ್ವರ್ಗದವರ ಅಭಿವೃದ್ಧಿ ಮಾಡುವುದಾದರೆ ಶೋಷಿತರ ಅಭಿವೃದ್ಧಿ ಯಾವಾಗ ? ವ್ಯವಸ್ಥೆಯನ್ನು ನಾವು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಪ್ರಶ್ನಿಸಿದರು.
ಕಳೆದ 25 ವರ್ಷಗಳಿಂದ ರಾಜ್ಯದಲ್ಲಿ ಪೂರ್ಣಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿಲ್ಲ. ಶಾಸಕರ ಮೂಗಿಗೆ ತುಪ್ಪ ಹಚ್ಚುವುದಕ್ಕಾಗಿ 5ರಿಂದ 6 ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಬಳಿ ಅನೇಕ ಖಾತೆಗಳಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಸಚಿವ ಸ್ಥಾನದ ಆಸೆಗಾಗಿ ಶಾಸಕರು ನೇರವಾಗಿ ಮಾತನಾಡುವುದ್ಲಿ. ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಉಳಿದಿಲ್ಲ. ದೇವರಾಜ ಅರಸು ಉದ್ಯಮಿಗಳನ್ನು ರಾಜಕೀಯದೊಳಗೆ ಬಿಟ್ಟುಕೊಳ್ಳಲಿಲ್ಲ. ಈಗಿನ ನಾಯಕರು ಹಣ ಪಡೆದು ಟಿಕೆಟ್ ನೀಡುತ್ತಾರೆ ಎಂದು ಹೇಳಿದರು. ರಾಜಕೀಯ ಎಂಬುದು ಒಂದು ಆಟವಾಗಿದ್ದು, ಅದನ್ನು ನಿಖರವಾಗಿ ಹೀಗೆ ಎಂದು ಹೇಳಲು ಸಾಧ್ಯವ್ಲಿ. ಜನರು ರಾಜಕೀಯವನ್ನು ಅರ್ಥ ಮಾಡಿಕೊಳ್ಳಬೇಕೆಂದು ಎಚ್.ವಿಶ್ವನಾಥ ಅಭಿಪ್ರಾಯಪಟ್ಟರು.
ಪತ್ರಕರ್ತ ಆರ್.ಟಿ.ವಿಠಲಮೂರ್ತಿ ಮಾತನಾಡಿ, ಎಚ್.ವಿಶ್ವನಾಥ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಅದಕ್ಕೆ ಪೂರಕ ಸನ್ನಿವೇಶಗಳು ಸೃಷ್ಟಿಯಾಗಲ್ಲಿ. ಚುನಾವಣೆಗಳ ಖರ್ಚು ವೆಚ್ಚ 20ರಿಂದ 2 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಎರಡು ಸಾವಿರ ಕೋಟಿ ಬಂಡವಾಳ ಹೂಡುವ ರಾಜಕೀಯ ಪಕ್ಷಗಳು 20 ಸಾವಿರ ಕೋಟಿ ಲಾಭ ಮಾಡದೆ ಇರುತ್ತಾರಾ ಎಂದರು. ಪ್ರಕಾಶಕ ಸಿರಿಗೇರಿ ಯರಿಸ್ವಾಮಿ, ಬಿಪಿಎಸ್‌ಸಿ ಶಾಲೆಯ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಹಾಜರಿದ್ದರು.
ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಬಳ್ಳಾರಿ ಕೊಡುಗೆ ದೊಡ್ಡದಿದೆ. ಆರ್ಥಿಕ ವಿಪ್ಲವಕ್ಕೆ ಕಾರಣವಾದ ನೆಲವಾಗಿದೆ. ಬಳ್ಳಾರಿ ಮೂಲದ ಪತ್ರಕರ್ತ ರವಿ ಬೆಳಗೆರೆ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದು ಪ್ರಶ್ನೆಯಾಗಿದೆ.| ಎಚ್.ವಿಶ್ವನಾಥ ಎಂಎಲ್ಸಿ