ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರ

4ravig3-Web
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪದಗ್ರಹಣದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಶನಿವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ಇತರರು ಇದ್ದರು.
Published on

ಬೆಳಗಾವಿ: ಕಾಂಗ್ರೆಸ್ ಇಲ್ಲಿಯವರೆಗೆ ಬೇರೆ ಇತ್ತು, ಈಗ ಬದಲಾಗಿದೆ. ಪಕ್ಷ ಸಂಘಟನೆಗೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಒತ್ತು ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪದಗ್ರಹಣದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಶನಿವಾರ ಆಗಮಿಸಿದ ಅವರು, ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಹೈಕಮಾಂಡ್ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ಹೀಗಾಗಿ ಇನ್ಮುಂದೆ ನಮ್ಮ ಹೋರಾಟ ಜಿಲ್ಲೆಗೆ ಮಾತ್ರ ಸೀಮಿತವಲ್ಲ. ಇಡೀ ರಾಜ್ಯಕ್ಕೆ ವಿಸ್ತರಣೆಯಾಗಲಿದೆ ಎಂದರು.

ಕಾರ್ಯಕರ್ತರಿಗೆ ತರಬೇತಿ: ಬೆಳಗಾವಿ ಜಿಲ್ಲೆ ಸೇರಿ ರಾಜ್ಯಾದ್ಯಂತ ಕರೊನಾ ವೈರಸ್ ಸಂದರ್ಭದಲ್ಲಿ ಸರ್ಕಾರಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷ ಅತ್ಯುತ್ತಮ ಕೆಲಸ ಮಾಡಿದೆ. ಮುಂದೆಯೂ ಇದೇ ರೀತಿ ಎಲ್ಲ ಸಮಸ್ಯೆಗಳಿಗೆ ಕಾಂಗ್ರೆಸ್ ಸ್ಪಂದಿಸಿ ಅದರ ನಿವಾರಣೆಗೆ ಪ್ರಯತ್ನ ಮಾಡಲಿದೆ. ಘಟಪ್ರಭಾದಲ್ಲಿನ ಸೇವಾದಳ ತರಬೇತಿ ಕೇಂದ್ರವನ್ನು ಪುನಶ್ಚೇತನ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಂತರವಾಗಿ ತರಬೇತಿ ನೀಡುವ ಜವಾಬ್ದಾರಿ ನನ್ನ ಮೇಲಿದೆ. ಜಿಲ್ಲೆ, ತಾಲೂಕು ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು ಎಂದು ಜಾರಕಿಹೊಳಿ ತಿಳಿಸಿದರು.

ಕಾಂಗ್ರೆಸ್ ಬಿಟ್ಟು ಹೋಗಿರುವ ನಾಯಕರನ್ನು ವಾಪಸ್ ಪಕ್ಷಕ್ಕೆ ಕರೆ ತರಲು ಈಗಾಗಲೇ ಕೆಪಿಸಿಸಿ ಅಧ್ಯಕ್ಷರು ತಂಡ ರಚನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಜಿಲ್ಲಾ ಪ್ರವಾಸ ನಡೆಸಿ ನೀಡುವ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು.| ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net