

| ಗಿರೀಶ್ ಗರಗ ಬೆಂಗಳೂರು
ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ವಿಚಾರದಲ್ಲಿ ಕೇಂದ್ರ ಸರ್ಕಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಹ ಪರಿಹಾರ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ ಲೆಕ್ಕ ಹಾಕಿದ ನಷ್ಟದ ಪ್ರಮಾಣದಲ್ಲಿ ಶೇ.5 ಕೂಡ ಪರಿಹಾರದ ಮೊತ್ತವಾಗಿ ಕೇಂದ್ರ ಸರ್ಕಾರ ನೀಡಿಲ್ಲ.
ಯಾವುದೇ ಅನುದಾನ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ತಾರತಮ್ಯ ಧೋರಣೆ ತೋರುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಇದೆ. ರಾಜ್ಯ ಸರ್ಕಾರ ಲೆಕ್ಕ ಹಾಕಿದಂತೆ 2018ರಿಂದ 2020ರವರೆಗೆ ಉಂಟಾದ ಪ್ರವಾಹದಲ್ಲಿ 49 ಸಾವಿರ ಕೋಟಿ ರೂ. ಮೊತ್ತದ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳು, ರಸ್ತೆ, ಬೆಳೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿತ್ತು. ಅಷ್ಟು ಮೊತ್ತದಲ್ಲಿ ಕೇಂದ್ರ ಸರ್ಕಾರದಿಂದ 2018 ಮತ್ತು 2019ರಲ್ಲಿನ ಪ್ರವಾಹಕ್ಕಷ್ಟೇ ಪರಿಹಾರ ದೊರಕಿದೆ. 2020ರ ಪರಿಹಾರದ ಮೊತ್ತ ಈವರೆಗೆ ಕೇಂದ್ರ ಸರ್ಕಾರದಿಂದ ದೊರೆತಿಲ್ಲ.
2 ಸಾವಿರ ಕೋಟಿ ರೂ.: ರಾಜ್ಯ ಸರ್ಕಾರದ ಲೆಕ್ಕಾಚಾರದ ಪ್ರಕಾರ 2020 ಸೇರಿ ಮೂರು ವರ್ಷಗಳಲ್ಲಿ 48,863.75 ಕೋಟಿ ರೂ. ಪ್ರವಾಹದಿಂದಾದ ಹಾನಿಯ ಪ್ರಮಾಣವಾಗಿದೆ. ಅದರಲ್ಲಿ 2019ರ ಪ್ರವಾಹದಿಂದಾಗಿಯೇ 35,160.81 ಕೋಟಿ ರೂ. ಹಾನಿಯಾಗಿದೆ. ಆ ಮೂರು ವರ್ಷಗಳ ಹಾನಿಯ ಪ್ರಮಾಣದಲ್ಲಿ ಈವರೆಗೆ ಕೇಂದ್ರ ಸರ್ಕಾರದಿಂದ ಕೇವಲ 2,178.7 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ.
ಬಾಕಿಯಿಲ್ಲ ಎನ್ನುತ್ತಿರುವ ಸರ್ಕಾರ: ಭಾರಿ ಪ್ರಮಾಣದ ನಷ್ಟವುಂಟಾದರೂ ಕೇಂದ್ರ ಅಲ್ಪ ಪ್ರಮಾಣದ ಪರಿಹಾರ ನೀಡಿದೆ. ಅದು ಕೂಡ ರಾಷ್ಟ್ರೀಯ ವಿಪತ್ತು ನಿಧಿಯಿಂದ (ಎನ್ಡಿಆರ್ಎಫ್ ಫ್ಂಡ್) ಪರಿಹಾರದ ಹಣ ನೀಡಲಾಗಿದೆ. ಅದರ ಜತೆಗೆ ರಾಜ್ಯ ವಿಪತ್ತು ನಿಧಿಯಲ್ಲಿನ ಶೇ.35 ಬಳಕೆಗೆ ಕೇಂದ್ರ ಅನುಮತಿ ನೀಡಿದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ನೆರೆ ಪರಿಹಾರ ದೊರೆತಿಲ್ಲ. ಅಲ್ಲದೆ, 2020ರ ನೆರೆ ಪರಿಹಾರ ಈವರೆಗೆ ಪಾವತಿಯಾಗಿಲ್ಲ. ಆದರೂ, ಕಂದಾಯ ಇಲಾಖೆ ಮಾತ್ರ ಕೇಂದ್ರದಿಂದ ಯಾವುದೇ ಪರಿ ಹಾರದ ಮೊತ್ತ ಬಾಕಿ ಉಳಿದಿಲ್ಲಂದು ಹೇಳುತ್ತಿದೆ.
948 ರಸ್ತೆ ಕಾಮಗಾರಿ
ಭಾರಿ ಮಳೆಯಿಂದಾಗಿ ಸಾವಿರಾರು ಕಿ.ಮೀ. ಉದ್ದದ ರಸ್ತೆ ಹಾಳಾಗಿದೆ. ಅದರ ದುರಸ್ತಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ 948 ಕಾಮ ಗಾರಿ ಕೈಗೊಂಡಿದೆ. ಅದಕ್ಕಾಗಿ 203.57 ಕೋಟಿ ರೂ. ಖರ್ಚು ಮಾಡಲಾಗಿದೆ. ಇದು 2018 ಮತ್ತು 2019ಕ್ಕೆ ಸಂಬಂಧಿಸಿದಾಗಿದ್ದು, 2020ರಲ್ಲಾದ ಹಾನಿ ಬಗ್ಗೆ ಲೆಕ್ಕ ಹಾಕಲಾಗುತ್ತಿದೆ.
1,367 ಕೋಟಿ ರೂ. ಬೆಳೆ ಹಾನಿ
ಪ್ರವಾಹದಿಂದಾಗಿ 2018 ಮತ್ತು 2019ರಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ 1,366.98 ಕೋಟಿ ರೂ. ಬೆಳೆ ಪರಿಹಾರ ನೀಡಲಾಗಿದೆ. ಅದೇ ರೀತಿ ಮನೆಗಳಿಗಾದ ಹಾನಿಗೆ ಸಂಬಂಧಿಸಿದಂತೆ 239.33 ಕೋಟಿ ರೂ. ಪರಿಹಾರ ನೀಡಲಾಗಿದೆ.